
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಆಧಾರ್ ನೋಂದಣಿ ಹಾಗೂ ನವೀಕರಣ ಸೇವೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ವತಿಯಿಂದ ಕಾರವಾರದಲ್ಲಿ ನೂತನ ಆಧಾರ್ ಸೇವಾ ಕೇಂದ್ರ (ASK) ಆರಂಭಿಸಲಾಗುತ್ತಿದೆ.
ಕಾರವಾರದ ಕೋಣೆಕರ್‌ವಾಡದಲ್ಲಿರುವ ವಿರಾಟ್ ಅಪಾರ್ಟ್‌ಮೆಂಟ್‌ನ ನೆಲ ಮಹಡಿಯಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ನವೆಂಬರ್ 13ರಂದು ಬೆಳಿಗ್ಗೆ 11 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ.
ಜಿಲ್ಲೆಯ ಜನರಿಗೆ ಆಧಾರ್ ನೋಂದಣಿ ಹಾಗೂ ಆಧಾರ್ ವಿವರಗಳ ನವೀಕರಣ ಸೇವೆಗಳನ್ನು ಸುಲಭವಾಗಿ ಮತ್ತು ತ್ವರಿತವಾಗಿ ಒದಗಿಸುವ ಉದ್ದೇಶದಿಂದ ಈ ಕೇಂದ್ರವನ್ನು ಆರಂಭಿಸಲಾಗುತ್ತಿದೆ.
ಇದರಿಂದ ಸಾರ್ವಜನಿಕರು ಒಂದೇ ಸ್ಥಳದಲ್ಲಿ ಅಗತ್ಯ ಆಧಾರ್ ಸೇವೆಗಳನ್ನು ಪಡೆಯಲು ಅನುಕೂಲವಾಗಲಿದೆ ಎಂದು ಯುಐಡಿಎಐ ಬೆಂಗಳೂರು ಪ್ರಾದೇಶಿಕ ಕಚೇರಿಯ ನಿರ್ದೇಶಕರು ತಿಳಿಸಿದ್ದಾರೆ.
