UK Express Logo

ಶಾಸಕರ ಅಧ್ಯಕ್ಷತೆಯಲ್ಲಿ ಪ್ರಜಾಸೇವೆ ಆಂದೋಲನ: ಸಾರ್ವಜನಿಕರಿಗೆ ಅಹವಾಲು ಸಲ್ಲಿಸಲು ಅವಕಾಶ

By UKExpress on 9/11/2026

ಕಾರವಾರ: ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ಮನೆ ಬಾಗಿಲಿನಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸೆಪ್ಟೆಂಬರ್ 12ರಂದು ಬೆಳಿಗ್ಗೆ 10.30ಕ್ಕೆ ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕು ಹಾಗೂ ಹೋಬಳಿ ಮಟ್ಟದ ‘ಪ್ರಜಾಸೇವೆ ಆಂದೋಲನ’ ಸಭೆಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.

ಸಿದ್ದಾಪುರ ತಾಲೂಕಿನ ಕೋಡ್ಕಣಿ ಹೋಬಳಿಯ ಹಲಗೇರಿ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ಟಿ. ನಾಯ್ಕ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಪ್ರಜಾಸೇವೆ ಆಂದೋಲನ ಸಭೆ ನಡೆಯಲಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಕುಮಟಾ ತಾಲೂಕಿನ ಗೋಕರ್ಣ ಹೋಬಳಿಯ ತೊರ್ಕೆ ಗ್ರಾಮದ ನಾಡವರ ಸಭಾಭವನದಲ್ಲಿ ಕುಮಟಾ-ಹೊನ್ನಾವರ ಶಾಸಕ ದಿನಕರ ಕೆ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಹೊನ್ನಾವರ ತಾಲೂಕಿನ ಮಂಕಿ ಹೋಬಳಿಯ ಕುಂಬಾರಕೇರಿಯ ಶ್ರೀ ಕೊಕ್ಕೇಶ್ವರ ಶಂಭುಲಿಂಗ ದೇವಸ್ಥಾನದ ಸಭಾಭವನದಲ್ಲಿ ವಿಧಾನಸಭೆಯ ಉಪಾಧ್ಯಕ್ಷರು ಹಾಗೂ ಭಟ್ಕಳ-ಹೊನ್ನಾವರ ಶಾಸಕ ಮಂಕಾಳ್ ವೈದ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ಜರುಗಲಿದೆ.

ಕಾರವಾರ ತಾಲೂಕಿನ ಘಾಡಸಾಯಿ ಹೋಬಳಿಯ ಮಲ್ಲಾಪುರ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಕರ್ನಾಟಕ ಮಾರ್ಕೆಟಿಂಗ್, ಕಮ್ಯೂನಿಕೇಶನ್ ಮತ್ತು ಅಡ್ವರ್ಟೈಸಿಂಗ್ ಏಜೆನ್ಸಿ ಲಿಮಿಟೆಡ್ ಅಧ್ಯಕ್ಷರು ಹಾಗೂ ಕಾರವಾರ-ಅಂಕೋಲಾ ಶಾಸಕ ಸತೀಶ್ ಕೃಷ್ಣ ಸೈಲ್ ಅವರ ಅಧ್ಯಕ್ಷತೆಯಲ್ಲಿ ಪ್ರಜಾಸೇವೆ ಆಂದೋಲನ ಸಭೆ ನಡೆಯಲಿದೆ.

ಮುಂಡಗೋಡ ತಾಲೂಕಿನ ಪಾಳಾ ಹೋಬಳಿಯ ಅಂಬೇಡ್ಕರ್ ಭವನದಲ್ಲಿ ಯಲ್ಲಾಪುರ-ಮುಂಡಗೋಡ ಶಾಸಕ ಶಿವರಾಮ ಹೆಬ್ಬಾರ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಜೋಯಿಡಾ ತಾಲೂಕಿನ ಕುಂಬಾರವಾಡಾ ಹೋಬಳಿಯ ಕಾತೇಲಿ ಗ್ರಾಮದ ಕ್ಷೇತ್ರಪಾಲ ಸಭಾಭವನದಲ್ಲಿ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಹಳಿಯಾಳ-ದಾಂಡೇಲಿ-ಜೋಯಿಡಾ ಶಾಸಕ ಆರ್.ವಿ. ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ಹೋಬಳಿ ಮಟ್ಟದ ಸಭೆ ಜರುಗಲಿದೆ.

ಈ ಸಭೆಗಳ ಮೂಲಕ ಸಾರ್ವಜನಿಕರ ವಿವಿಧ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಆಲಿಸಿ, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸಾಧ್ಯವಾದಷ್ಟು ತ್ವರಿತವಾಗಿ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತದೆ. ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವುದಕ್ಕೂ ಸಭೆಗಳು ಸಹಕಾರಿಯಾಗಲಿವೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಜಾಸೇವೆ ಆಂದೋಲನ ಸಭೆಗಳಲ್ಲಿ ಭಾಗವಹಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮನವಿ ಮಾಡಿದ್ದಾರೆ. ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯುವುದರ ಜೊತೆಗೆ ಸರ್ಕಾರದ ವಿವಿಧ ಯೋಜನೆಗಳ ಸವಲತ್ತುಗಳನ್ನು ಪಡೆದುಕೊಳ್ಳಲು ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಅವರು ತಿಳಿಸಿದ್ದಾರೆ.

ಕಾರವಾರ ತಾಲೂಕಿನ ಸಾರ್ವಜನಿಕರಿಗಾಗಿ ನಡೆಯುವ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ ಸಭೆಯು ಸೆಪ್ಟೆಂಬರ್ 12ರಂದು ಬೆಳಿಗ್ಗೆ 10.30ಕ್ಕೆ ಘಾಡಸಾಯಿ ಹೋಬಳಿಯ ಮಲ್ಲಾಪುರ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ ಎಂದು ಕಾರವಾರ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.