ಮುಂಡಗೋಡ ಟಿಬೆಟಿಯನ್ ಕ್ಯಾಂಪ್‌ನಲ್ಲಿ ₹4.60 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತು ಕಳವು

ಮುಂಡಗೋಡ: ಟಿಬೆಟಿಯನ್ ಕ್ಯಾಂಪ್ ನಂ.4ರ ಮನೆಯೊಂದರಲ್ಲಿ ಕಳ್ಳತನ ನಡೆದಿದ್ದು, ಸುಮಾರು ₹4.60 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಕಳ್ಳರು ಕದ್ದೊಯ್ದಿರುವ ಘಟನೆ ವರದಿಯಾಗಿದೆ.
ಸೆ.8ರ ಮಧ್ಯಾಹ್ನ 3 ಗಂಟೆಯಿಂದ ಸೆ.9ರ ಸಂಜೆ 5 ಗಂಟೆಯ ನಡುವಿನ ಅವಧಿಯಲ್ಲಿ ಮನೆ ಮಾಲೀಕರು ಹೊರಗಿದ್ದಾಗ ಕಳ್ಳತನ ನಡೆದಿದೆ ಎನ್ನಲಾಗಿದೆ. ಮನೆಯ ಮುಂಭಾಗದ ಬಾಗಿಲಿಗೆ ಹಾಕಿದ್ದ ಕೀಲಿಯನ್ನು ಯಾವುದೋ ವಸ್ತುವಿನ ಸಹಾಯದಿಂದ ತೆಗೆದು ಒಳನುಗ್ಗಿದ ಕಳ್ಳರು, ಕೊಠಡಿಯಲ್ಲಿದ್ದ ಟ್ರಜರಿಯ ಬಾಗಿಲು ತೆರೆದು ಅದರಲ್ಲಿದ್ದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಳುವಾದ ವಸ್ತುಗಳಲ್ಲಿ 15 ಗ್ರಾಂ ತೂಕದ ಬಂಗಾರದ ಸರ (₹1.50 ಲಕ್ಷ), 25 ಗ್ರಾಂ ಬಂಗಾರದ ಬಿಸ್ಕೆಟ್ ಚೈನ್ (₹2.50 ಲಕ್ಷ), 7 ಬೆಳ್ಳಿಯ ಬಾಲ್‌ಗಳು (₹40 ಸಾವಿರ) ಹಾಗೂ ಒಂದು ಬೆಳ್ಳಿ ದೀಪ (₹20 ಸಾವಿರ) ಸೇರಿವೆ. ಒಟ್ಟು ಕಳುವಾದ ವಸ್ತುಗಳ ಅಂದಾಜು ಮೌಲ್ಯ ₹4.60 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ನವಾಂಗ್ ಟೆಂಡನ್ ಎಂಬುವವರು ಮುಂಡಗೋಡ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ. ಕಳವು ಪ್ರಕರಣದ ಪತ್ತೆ ಕಾರ್ಯ ಮುಂದುವರಿದಿದ್ದು, ತನಿಖಾಧಿಕಾರಿಯಾಗಿ ಪೊಲೀಸ್ ನಿರೀಕ್ಷಕ ರಮೇಶ ಹನಾಪೂರ ಕಾರ್ಯನಿರ್ವಹಿಸುತ್ತಿದ್ದಾರೆ.
