
ಶಿರಸಿ: ಅತಿಕ್ರಮಣ ಜಾಗದಲ್ಲಿರುವ ಮನೆಗಳ ನಂಬರ್‌ಗಳನ್ನು ರದ್ದುಗೊಳಿಸುವ ಸರ್ಕಾರದ ಆದೇಶದಿಂದ ಗ್ರಾಮೀಣ ಭಾಗದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುವ ಸಾಧ್ಯತೆಯಿದ್ದು, ಮೂಲಭೂತ ಸೌಕರ್ಯಗಳಿಂದ ವಂಚಿತರಾಗುವ ಆತಂಕ ಎದುರಾಗಿದೆ ಎಂದು ಶಾಸಕರಾದ ಭೀಮಣ್ಣ ನಾಯ್ಕ್ ಹಾಗೂ ಶಿವರಾಮ್ ಹೆಬ್ಬಾರ್ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರದ ಆದೇಶವನ್ನು ಕೂಡಲೇ ಹಿಂಪಡೆಯುವಂತೆ ಒತ್ತಾಯಿಸಿ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಬಡ ಹಾಗೂ ಸಾಮಾನ್ಯ ಜನರು ಹಲವು ವರ್ಷಗಳಿಂದ ವಾಸಿಸುತ್ತಿರುವ ಮನೆಗಳ ನಂಬರ್‌ಗಳನ್ನು ರದ್ದುಗೊಳಿಸುವುದರಿಂದ ವಿವಿಧ ಸಮಸ್ಯೆಗಳು ಎದುರಾಗಲಿವೆ. ಮನೆಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳು ಹಾಗೂ ಸರ್ಕಾರಿ ಸೌಲಭ್ಯಗಳನ್ನು ಪಡೆಯುವುದಕ್ಕೂ ತೊಂದರೆಯಾಗುವ ಸಾಧ್ಯತೆಯಿದೆ. ಹೀಗಾಗಿ ಸಾರ್ವಜನಿಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಈ ಆದೇಶವನ್ನು ಮರುಪರಿಶೀಲಿಸಿ ಹಿಂಪಡೆಯಬೇಕು ಎಂದು ಭೀಮಣ್ಣ ನಾಯ್ಕ್ ಹಾಗೂ ಶಿವರಾಮ್ ಹೆಬ್ಬಾರ್ ಸಚಿವರಲ್ಲಿ ಮನವಿ ಮಾಡಿದರು.
ಶಾಸಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಈಶ್ವರ ಖಂಡ್ರೆ, ಮುಂಬರುವ ವಿಧಾನಸಭಾ ಅಧಿವೇಶನದ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಶಾಸಕರ ಸಭೆ ಕರೆದು ಈ ವಿಷಯದ ಕುರಿತು ಸಮಗ್ರವಾಗಿ ಚರ್ಚಿಸಲಾಗುವುದು ಎಂದು ತಿಳಿಸಿದರು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಆದೇಶವನ್ನು ಹಿಂಪಡೆಯುವ ನಿಟ್ಟಿನಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮ ಪಂಚಾಯತ್‌ಗಳ ತೆರಿಗೆ, ದರ ಮತ್ತು ಶುಲ್ಕಗಳ ನಿಯಮಗಳು–2025ರ ಅನ್ವಯ ಆಸ್ತಿಗಳ ನಿರ್ಧರಣೆ ಹಾಗೂ ಇ-ಸ್ವತ್ತು 2.0 ತಂತ್ರಾಂಶದಿಂದ ಆಸ್ತಿಗಳನ್ನು ಕೈಬಿಡುವ ಕುರಿತು ಹೊರಡಿಸಿರುವ ಮಾರ್ಗಸೂಚಿಯಿಂದ ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆಯೂ ಸಚಿವರ ಗಮನಕ್ಕೆ ತರಲಾಯಿತು.
ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಸ್ತುತ ನಿಯಮಾವಳಿಗಳನ್ನು ಅಗತ್ಯವಿರುವ ಕಡೆಗಳಲ್ಲಿ ಸಡಿಲಗೊಳಿಸುವುದರ ಜೊತೆಗೆ, ಗ್ರಾಮೀಣ ಪ್ರದೇಶದ ಜನರಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಮನವಿ ಮಾಡಿದರು.
ಈ ಕುರಿತು ಸಚಿವ ಈಶ್ವರ ಖಂಡ್ರೆ, ಗ್ರಾಮೀಣ ಭಾಗದ ಜನರಿಗೆ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
