
ಕುಮಟಾ: ಸಂತೆ ಮಾರ್ಕೆಟ್‌ನಲ್ಲಿ ಚಿನ್ನದ ಸರ ಹಾಗೂ ಮೊಬೈಲ್ ಕಳೆದುಕೊಂಡು ಕಂಗಾಲಾಗಿದ್ದ ಮಹಿಳೆಗೆ ಕುಮಟಾ ಪೊಲೀಸರು ತಕ್ಷಣ ಸ್ಪಂದಿಸಿ, ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕಳೆದುಹೋದ ವಸ್ತುಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ಮರಳಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕುಮಟಾ ತಾಲೂಕಿನ ಹಾರೋಡಿ ಗ್ರಾಮದ ಅಮ್ಮಾ ಗೋಯ್ದು ಗೌಡ (45) ಅವರು ಬುಧವಾರ ಕುಮಟಾದ ಎಪಿಎಂಸಿ ಪ್ರಾಂಗಣದಲ್ಲಿ ನಡೆಯುತ್ತಿದ್ದ ಸಂತೆ ಮಾರ್ಕೆಟ್‌ಗೆ ಆಗಮಿಸಿದ್ದರು. ಮಾರ್ಕೆಟ್‌ನಲ್ಲಿ ವಿಪರೀತ ಜನಜಂಗುಳಿ ಇದ್ದ ಹಿನ್ನೆಲೆಯಲ್ಲಿ ಅವರ ಚಿನ್ನದ ಸರ ಹಾಗೂ ಮೊಬೈಲ್ ಕಳೆದುಹೋಗಿತ್ತು. ಇದರಿಂದ ಆತಂಕಕ್ಕೊಳಗಾದ ಅವರು ಸ್ಥಳೀಯರ ಸಲಹೆಯಂತೆ ಕುಮಟಾ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಮಾಹಿತಿ ನೀಡಿದರು.
ಮಹಿಳೆಯ ಅಳಲನ್ನು ಆಲಿಸಿದ ಪೊಲೀಸರು ಅವರಿಗೆ ಧೈರ್ಯ ತುಂಬಿ, ಕಳೆದುಹೋದ ಚಿನ್ನದ ಸರ ಹಾಗೂ ಮೊಬೈಲ್ ಪತ್ತೆಹಚ್ಚಿ ಮರಳಿಸುವುದಾಗಿ ಭರವಸೆ ನೀಡಿದರು. ಬಳಿಕ ಯಾವುದೇ ವಿಳಂಬ ಮಾಡದೆ ಸಂತೆ ಮಾರ್ಕೆಟ್‌ನತ್ತ ತೆರಳಿದ ಪೊಲೀಸರು, ಚಿನ್ನದ ಸರ ಯಾರ ಕೈ ಸೇರಿದೆ ಎಂಬುದನ್ನು ಪತ್ತೆಹಚ್ಚಲು ಕಾರ್ಯಾಚರಣೆ ಆರಂಭಿಸಿದರು.
ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಚಿನ್ನದ ಸರ ಸಿಕ್ಕ ವ್ಯಕ್ತಿಯು ಅದನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ಮೂಲಕ ಅಪರಾಧ ಪ್ರಕರಣ ದಾಖಲಾಗುವ ಮುನ್ನವೇ ಚಿನ್ನದ ಸರವನ್ನು ಮರಳಿಸಲಾಗಿದೆ. ನಂತರ ಪೊಲೀಸರು ಕಳೆದುಹೋದ ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದರು.
ಕುಮಟಾ ಕ್ರೈಂ ತಂಡದ ಗಣೇಶ ನಾಯ್ಕ ಹಾಗೂ ಗುರು ನಾಯಕ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪೊಲೀಸರ ತ್ವರಿತ ಸ್ಪಂದನೆ ಹಾಗೂ ಕ್ಷಿಪ್ರ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
