ಉತ್ತರ ಕನ್ನಡದ ಹೆಮ್ಮೆಯ ಪುತ್ರ ರಾಮಕೃಷ್ಣ ಹೆಗಡೆ: ಮೌಲ್ಯಾಧಾರಿತ ರಾಜಕಾರಣದ ಪ್ರತೀಕ, ವಿಕೇಂದ್ರೀಕರಣದ ಹರಿಕಾರ

ಉತ್ತರ ಕನ್ನಡದ ಸಿದ್ದಾಪುರ ತಾಲೂಕಿನ ದೊಡ್ಮನೆ ಗ್ರಾಮದಲ್ಲಿ ಜನಿಸಿ ಕರ್ನಾಟಕದ ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಿದ ರಾಮಕೃಷ್ಣ ಹೆಗಡೆ (29-08-1926 – 12-01-2004) ಅವರು ರಾಜ್ಯದ ಹಿರಿಯ ರಾಜಕಾರಣಿ ಹಾಗೂ ರಾಜಕೀಯ ಮುತ್ಸದ್ಧಿಯಾಗಿದ್ದರು. ಕರ್ನಾಟಕದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದ ಅವರು, ಮೌಲ್ಯಾಧಾರಿತ ರಾಜಕಾರಣಕ್ಕೆ ಹೊಸ ಅರ್ಥ ನೀಡಿದ ನಾಯಕರಾಗಿದ್ದರು.
ಸ್ವಾತಂತ್ರ್ಯ ಹೋರಾಟದ ‘ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ಭಾಗವಹಿಸಿದ್ದ ಹೆಗಡೆಯವರು ಬಳಿಕ ಸಕ್ರಿಯ ರಾಜಕಾರಣ ಪ್ರವೇಶಿಸಿದರು. ಎಸ್. ನಿಜಲಿಂಗಪ್ಪ ಹಾಗೂ ಬಿ.ಡಿ. ಜತ್ತಿ ಅವರ ಸಚಿವ ಸಂಪುಟಗಳಲ್ಲಿ ಯುವ ಸಚಿವರಾಗಿ ಕಾರ್ಯನಿರ್ವಹಿಸಿ, ಹಣಕಾಸು ಸೇರಿದಂತೆ ಪ್ರಮುಖ ಖಾತೆಗಳನ್ನು ನಿಭಾಯಿಸಿದ್ದರು. ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಜೈಲು ಸೇರಿದ್ದ ಅವರು, ಬಳಿಕ ಜನತಾ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.
ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿ
1983ರಲ್ಲಿ ಕಾಂಗ್ರೆಸ್ ಅಧಿಪತ್ಯಕ್ಕೆ ಅಂತ್ಯ ಹಾಡಿ ಜನತಾ ಪಕ್ಷ ಅಧಿಕಾರಕ್ಕೆ ಬಂದಾಗ, ರಾಮಕೃಷ್ಣ ಹೆಗಡೆಯವರು ಕರ್ನಾಟಕದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಮುಖ್ಯಮಂತ್ರಿಯಾಗಿ ಜನತಾ ದರ್ಶನ, ಆಡಳಿತ ಸುಧಾರಣೆ ಹಾಗೂ ಜನರೊಂದಿಗೆ ನೇರ ಸಂಪರ್ಕಕ್ಕೆ ಆದ್ಯತೆ ನೀಡಿದರು. ಸಾರ್ವಜನಿಕ ಜೀವನದಲ್ಲಿ ನೈತಿಕ ಹೊಣೆಗಾರಿಕೆಗೆ ಮಹತ್ವ ನೀಡಿದ ಅವರು, ಅಧಿಕಾರಕ್ಕಿಂತ ಸಿದ್ಧಾಂತ ಮತ್ತು ಸಾರ್ವಜನಿಕ ಗೌರವವೇ ಮುಖ್ಯವೆಂದು ನಂಬಿದ ನಾಯಕರಾಗಿದ್ದರು.
ವಿಕೇಂದ್ರೀಕರಣದ ರೂವಾರಿ
ಹೆಗಡೆಯವರ ಆಡಳಿತದ ಪ್ರಮುಖ ಕೊಡುಗೆಗಳಲ್ಲಿ ಆಡಳಿತ ವಿಕೇಂದ್ರೀಕರಣವೂ ಒಂದು. ನಜೀರ್ ಸಾಬ್ ಅವರ ಸಹಕಾರದೊಂದಿಗೆ ಪಂಚಾಯತ್ ರಾಜ್ ಹಾಗೂ ಜಿಲ್ಲಾ ಪರಿಷತ್ ವ್ಯವಸ್ಥೆಗೆ ಬಲ ನೀಡುವ ಕ್ರಮಗಳನ್ನು ಕೈಗೊಂಡು, ಅಧಿಕಾರವನ್ನು ತಳಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡಿದರು. ಭ್ರಷ್ಟಾಚಾರ ನಿಯಂತ್ರಣ ಮತ್ತು ಸಾರ್ವಜನಿಕ ಅಧಿಕಾರಿಗಳ ಮೇಲಿನ ಹೊಣೆಗಾರಿಕೆ ಹೆಚ್ಚಿಸುವ ಉದ್ದೇಶದಿಂದ ಕರ್ನಾಟಕ ಲೋಕಾಯುಕ್ತ ವ್ಯವಸ್ಥೆ ಸ್ಥಾಪನೆಗೂ ಅವರ ಆಡಳಿತದಲ್ಲಿ ಮಹತ್ವ ದೊರೆಯಿತು.
ರಾಷ್ಟ್ರ ರಾಜಕಾರಣದಲ್ಲೂ ಛಾಪು
ರಾಜ್ಯ ರಾಜಕಾರಣಕ್ಕೆ ಸೀಮಿತವಾಗದೆ ರಾಷ್ಟ್ರಮಟ್ಟದಲ್ಲೂ ಹೆಗಡೆಯವರು ತಮ್ಮದೇ ಛಾಪು ಮೂಡಿಸಿದರು. ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಹಾಗೂ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿ ರಾಷ್ಟ್ರದ ಆಡಳಿತ ಮತ್ತು ಆರ್ಥಿಕ ನೀತಿಗಳಲ್ಲೂ ಪಾತ್ರ ವಹಿಸಿದರು. ಅನೇಕ ಯುವ ನಾಯಕರಿಗೆ ರಾಜಕೀಯ ವೇದಿಕೆ ಕಲ್ಪಿಸಿ, ಅವರನ್ನು ಬೆಳೆಸಿದ ಜನನಾಯಕ ಎಂಬ ಹೆಗ್ಗಳಿಕೆಯೂ ಅವರಿಗಿದೆ.
ಶಿರಸಿಯ ‘ಹೆಗಡೆ 100’
ಹೆಗಡೆಯವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಶಿರಸಿಯ ರಾಮಕೃಷ್ಣ ಹೆಗಡೆ ವೃತ್ತವೂ ವಿಶೇಷ ಗಮನ ಸೆಳೆಯುತ್ತಿದೆ. ವೃತ್ತದಲ್ಲಿರುವ ಹೆಗಡೆಯವರ ಆಳೆತ್ತರದ ಪ್ರತಿಮೆಯ ಪಕ್ಕದಲ್ಲೇ ‘ಹುಬ್ಬಳ್ಳಿ 100’ ಎಂದು ನಮೂದಿಸಿರುವ ಮೈಲಿಗಲ್ಲಿದೆ. ಹೀಗಾಗಿ ಶತಮಾನೋತ್ಸವದ ಸಂದರ್ಭದಲ್ಲಿ ‘ಹೆಗಡೆ 100’ ಎನ್ನುವಂತಿರುವ ಈ ಕಾಕತಾಳೀಯ ದೃಶ್ಯ ಶಿರಸಿಯಲ್ಲಿ ವಿಶೇಷ ಆಕರ್ಷಣೆಯಾಗಿದೆ.
ಹೆಗಡೆ ಹೆಸರನ್ನು ಚಿರಸ್ಥಾಯಿಗೊಳಿಸಲು ಆಗ್ರಹ
ಹೆಗಡೆಯವರ ಆಡಳಿತ, ರಾಜಕೀಯ ಚಿಂತನೆ ಮತ್ತು ವಿಕೇಂದ್ರೀಕರಣದ ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಅವರ ಹೆಸರಿನಲ್ಲಿ ಗ್ರಾಮೀಣ ಅಭಿವೃದ್ಧಿ, ವಿಕೇಂದ್ರೀಕರಣ ಹಾಗೂ ರಾಜಕೀಯ ಚಿಂತನೆಯ ಅಧ್ಯಯನ ಪೀಠ ಸ್ಥಾಪಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಉತ್ತರ ಕನ್ನಡದ ಮಣ್ಣಿನಲ್ಲಿ ಹುಟ್ಟಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಹೆಗಡೆಯವರ ರಾಜಕೀಯ ಬದುಕು ಜಿಲ್ಲೆಯ ಹೆಮ್ಮೆಯ ಪ್ರತೀಕವಾಗಿದ್ದು, ಅವರ ಸಾರ್ವಜನಿಕ ಜೀವನದ ಶಿಸ್ತು, ಆಡಳಿತದ ದೃಷ್ಟಿಕೋನ ಮತ್ತು ಮೌಲ್ಯಾಧಾರಿತ ರಾಜಕಾರಣ ಮುಂದಿನ ಪೀಳಿಗೆಯ ನಾಯಕರಿಗೆ ಪ್ರೇರಣೆಯಾಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಮಾಹಿತಿ: ಅಂತರ್ಜಾಲ
