ಕಾರವಾರ: ಅಂಜದೀವ್ ದ್ವೀಪದ ಸಮೀಪ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆಯಾಗಿದ್ದು, ಅದರಲ್ಲಿದ್ದ 24 ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ರವಿವಾರ ನಸುಕಿನ ವೇಳೆ ಈ ಘಟನೆ ನಡೆದಿದೆ.
ಬೆಳ್ಳಂಬಾರ ಮೂಲದ ನೀಲಕಂಠ ಖಾರ್ವಿ ಅವರಿಗೆ ಸೇರಿದ ‘ಶ್ರೀ ಮಾತಾ’ ಮೀನುಗಾರಿಕಾ ಬೋಟ್ ಮೀನುಗಾರಿಕೆಗೆ ತೆರಳಿದ್ದ ವೇಳೆ ಸಮುದ್ರದಲ್ಲಿ ಅವಘಡಕ್ಕೀಡಾಗಿ ಮುಳುಗಡೆಯಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸಮೀಪದಲ್ಲಿದ್ದ ಐದಾರು ಮೀನುಗಾರಿಕಾ ಬೋಟ್‌ಗಳ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಮುಳುಗುತ್ತಿದ್ದ ಬೋಟ್‌ಗೆ ಹಗ್ಗ ಕಟ್ಟಿ ಅದನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಸಲಾಗಿದ್ದು, ಬೋಟ್‌ನಲ್ಲಿದ್ದ ಎಲ್ಲಾ 24 ಮಂದಿಯನ್ನು ಸುರಕ್ಷಿತವಾಗಿ ಇತರೆ ಬೋಟ್‌ಗಳಿಗೆ ಸ್ಥಳಾಂತರಿಸಲಾಗಿದೆ.
ಅವಘಡದಿಂದ ಬೋಟ್ ಹಾಗೂ ಅದರಲ್ಲಿದ್ದ ಮೀನುಗಾರಿಕಾ ಪರಿಕರಗಳಿಗೆ ಸೇರಿ ಸುಮಾರು ₹80 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿರುವ ಅಂದಾಜಿದೆ.
ಬೋಟ್ ಮುಳುಗಡೆಯ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ. ಘಟನೆ ಹಿನ್ನೆಲೆಯಲ್ಲಿ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯ ಮೀನುಗಾರರು ಆಗ್ರಹಿಸಿದ್ದಾರೆ.
