ಶಿರಸಿ: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಲಾರಿಯಲ್ಲಿ ಸಾಗಿಸುತ್ತಿದ್ದ ಪ್ರಕರಣವನ್ನು ಕಂದಾಯ, ಆಹಾರ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಪತ್ತೆಹಚ್ಚಿದ್ದಾರೆ. ನಗರದ ನಿಲೇಕಣಿ ಬಳಿ ನಡೆದ ಕಾರ್ಯಾಚರಣೆಯಲ್ಲಿ 473 ಚೀಲ ಪಡಿತರ ಅಕ್ಕಿ ಹಾಗೂ ಸಾಗಾಟಕ್ಕೆ ಬಳಸಿದ್ದ ಲಾರಿಯನ್ನು ಜಪ್ತಿ ಮಾಡಲಾಗಿದೆ.
ಸಿದ್ದಾಪುರ ಕಡೆಯಿಂದ ಬೆಳಗಾವಿ ಮಾರ್ಗವಾಗಿ ಕೊಲ್ಲಾಪುರಕ್ಕೆ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಅಧಿಕಾರಿಗಳಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ತಹಸೀಲ್ದಾರ ಪಟ್ಟರಾಜ ಗೌಡ ಹಾಗೂ ಶಿರಸಿ ನಗರ ಠಾಣೆ ಪಿಎಸ್‌ಐ ನರಸಿಂಹಲು ನೇತೃತ್ವದಲ್ಲಿ ಅಧಿಕಾರಿಗಳು ನಿಲೇಕಣಿ ಬಳಿ ಕಾರ್ಯಾಚರಣೆ ನಡೆಸಿ ಲಾರಿಯನ್ನು ತಡೆದು ಪರಿಶೀಲಿಸಿದರು.
ಪರಿಶೀಲನೆ ವೇಳೆ ಲಾರಿಯಲ್ಲಿ ಸಾಗಿಸುತ್ತಿದ್ದ 473 ಚೀಲ ಪಡಿತರ ಅಕ್ಕಿ ಪತ್ತೆಯಾಗಿದ್ದು, ಅಕ್ಕಿಯೊಂದಿಗೆ ಲಾರಿಯನ್ನೂ ವಶಕ್ಕೆ ಪಡೆಯಲಾಗಿದೆ. ಲಾರಿ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಇದೇ ವೇಳೆ ಲಾರಿಗೆ ಎಸ್ಕಾರ್ಟ್ ನೀಡುತ್ತಾ ಸಾಗುತ್ತಿದ್ದ ಎನ್ನಲಾದ ಕಾರಿನ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ಲಾರಿಯ ಚಲನವಲನದ ಕುರಿತು ಮುನ್ನೆಚ್ಚರಿಕೆ ನೀಡಲು ಅಥವಾ ತಪಾಸಣಾ ಕೇಂದ್ರಗಳ ಮಾಹಿತಿ ರವಾನಿಸಲು ಕಾರನ್ನು ಬಳಸಲಾಗುತ್ತಿತ್ತೇ ಎಂಬ ಅನುಮಾನ ವ್ಯಕ್ತವಾಗಿದ್ದು, ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಪಡಿತರ ಅಕ್ಕಿಯನ್ನು ಎಲ್ಲಿಂದ ಸಂಗ್ರಹಿಸಲಾಗಿತ್ತು, ಎಲ್ಲಿಗೆ ಸಾಗಿಸಲಾಗುತ್ತಿತ್ತು ಹಾಗೂ ಅಕ್ರಮ ಸಾಗಾಟದ ಹಿಂದೆ ಯಾರ ಕೈವಾಡವಿದೆ ಎಂಬ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಪ್ರಕರಣದ ತನಿಖೆ ಬಳಿಕ ಅಕ್ರಮ ಸಾಗಾಟದ ಸಂಪೂರ್ಣ ಜಾಲದ ಕುರಿತು ಹೆಚ್ಚಿನ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.
