
ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಸೋರಿಕೆಯಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬಂದ್ ಮಾಡಲಾಗಿದ್ದ ಯಲ್ಲಾಪುರ-ಹುಬ್ಬಳ್ಳಿ ಮಾರ್ಗದ ವಾಹನ ಸಂಚಾರ ಇದೀಗ ಮತ್ತೆ ಆರಂಭವಾಗಿದೆ. ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿಯ ಸತತ ಕಾರ್ಯಾಚರಣೆಯಿಂದ ಅನಿಲ ಸೋರಿಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿದೆ. ಇದೀಗ ರಸ್ತೆಯನ್ನು ಕ್ಲಿಯರ್ ಮಾಡಲಾಗಿದ್ದು, ಹೆದ್ದಾರಿಯಲ್ಲಿ ವಾಹನ ಸಂಚಾರವು ಸಹಜ ಸ್ಥಿತಿಗೆ ಮರಳಿದೆ.
ಪರ್ಯಾಯ ಮಾರ್ಗಗಳ ಅಗತ್ಯವಿಲ್ಲ: ಗ್ಯಾಸ್ ಸೋರಿಕೆಯಾದ ಸಂದರ್ಭದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಸಂಚಾರವನ್ನು ಸ್ಥಗಿತಗೊಳಿಸಿ, ವಾಹನಗಳನ್ನು ಹಳಿಯಾಳ ಮತ್ತು ಮುಂಡಗೋಡ ಮಾರ್ಗವಾಗಿ ಕಳುಹಿಸಲಾಗುತ್ತಿತ್ತು. ಕಾರ್ಯಾಚರಣೆ ಮುಗಿದು ರಸ್ತೆ ಸುರಕ್ಷಿತವಾಗಿರುವುದರಿಂದ, ಪ್ರಯಾಣಿಕರು ಇದೀಗ ನೇರವಾಗಿ ಯಲ್ಲಾಪುರ-ಹುಬ್ಬಳ್ಳಿ ಮುಖ್ಯ ಹೆದ್ದಾರಿಯನ್ನೇ ಬಳಸಬಹುದಾಗಿದೆ.
ಸತತ ಪ್ರಯತ್ನದ ಬಳಿಕ ರಸ್ತೆಯನ್ನು ತೆರವುಗೊಳಿಸಲಾಗಿದ್ದು, ಹೆದ್ದಾರಿಯಲ್ಲಿ ಯಾವುದೇ ಆತಂಕವಿಲ್ಲದೆ ವಾಹನಗಳು ಸಂಚರಿಸಲು ಪೊಲೀಸರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸಹಕರಿಸಿದ ಎಲ್ಲಾ ಪ್ರಯಾಣಿಕರಿಗೂ ಇಲಾಖೆ ಧನ್ಯವಾದ ತಿಳಿಸಿದೆ.
