ಗೃಹಬಳಕೆ ಸಿಲಿಂಡರ್ ದುರುಪಯೋಗ: ಹೋಟೆಲ್‌ಗಳ ಮೇಲೆ ಅಧಿಕಾರಿಗಳ ರೇಡ್, 5 ಸಿಲಿಂಡರ್ ವಶಕ್ಕೆ
ದಾಂಡೇಲಿ: ವಾಣಿಜ್ಯ ಸಿಲಿಂಡರ್ ಬದಲಾಗಿ ನಿಯಮಬಾಹಿರವಾಗಿ ಗೃಹಬಳಕೆಯ ಸಿಲಿಂಡರ್ ಬಳಸುತ್ತಿದ್ದ ನಗರದ ಹೋಟೆಲ್‌ಗಳ ಮೇಲೆ ಕಂದಾಯ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಗುರುವಾರ ಜಂಟಿ ದಾಳಿ ನಡೆಸಿ, 5 ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಗುರುವಾರ ಸಂಜೆ 5 ಗಂಟೆ ಸುಮಾರಿಗೆ ತಹಶೀಲ್ದಾರ್ ಶೈಲೇಶ್ ಪ್ರಮಾಣಂದ್ ಹಾಗೂ ಆಹಾರ ನಿರೀಕ್ಷಕರ ನೇತೃತ್ವದ ತಂಡ ನಗರದ ವಿವಿಧ ಹೋಟೆಲ್‌ಗಳು, ಟೀ ಅಂಗಡಿ ಹಾಗೂ ಎಗ್ ರೈಸ್ ಸೆಂಟರ್‌ಗಳ ಮೇಲೆ ದಿಢೀರ್ ಪರಿಶೀಲನೆ ನಡೆಸಿತು. ಈ ವೇಳೆ ನಿಯಮ ಉಲ್ಲಂಘಿಸಿ ಡೊಮೆಸ್ಟಿಕ್ ಸಿಲಿಂಡರ್‌ಗಳನ್ನು ಕಮರ್ಷಿಯಲ್ ಉದ್ದೇಶಕ್ಕೆ ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ತಕ್ಷಣವೇ ಅವುಗಳನ್ನು ಜಪ್ತಿ ಮಾಡಲಾಗಿದೆ.

ಅಧಿಕಾರಿಗಳ ಎಚ್ಚರಿಕೆ:
ದಾಳಿ ಬಳಿಕ ಮಾತನಾಡಿದ ತಹಶೀಲ್ದಾರ್ ಶೈಲೇಶ್ ಪ್ರಮಾಣಂದ್, "ಗೃಹಬಳಕೆ ಸಿಲಿಂಡರ್‌ಗಳ ದುರುಪಯೋಗ ತಡೆಯಲು ನಗರದಲ್ಲಿ ಈ ರೀತಿಯ ತಪಾಸಣಾ ಕಾರ್ಯಚರಣೆ ನಿರಂತರವಾಗಿ ನಡೆಯಲಿದೆ" ಎಂದರು.
ಆಹಾರ ನಿರೀಕ್ಷಕ ಗೋಪಿ ಚೌಹಾನ್ ಮಾತನಾಡಿ, "ಕಮರ್ಷಿಯಲ್ ಸಿಲಿಂಡರ್‌ಗಳ ಕೊರತೆ ಕೇವಲ ತಾತ್ಕಾಲಿಕವಾಗಿದೆ. ಇದನ್ನು ನೆಪವಾಗಿಸಿಕೊಂಡು ಹೋಟೆಲ್ ಮಾಲೀಕರು ಸಾರ್ವಜನಿಕ ಬಳಕೆಯ ಗ್ಯಾಸ್ ಸಿಲಿಂಡರ್‌ಗಳನ್ನು ಬಳಸುವಂತಿಲ್ಲ. ಇದರಿಂದಾಗಿ ಸಾಮಾನ್ಯ ಮನೆಗಳಿಗೆ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ. ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಎಚ್ಚರಿಕೆ ರವಾನಿಸಿದರು.
ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಗೋಪಿ ಚೌಹಾನ್, ದಯಾನಂದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
