ಕರಾವಳಿ ಜನತೆಗೆ ಸಿಹಿ ಸುದ್ದಿ: ಯುಗಾದಿ ಮುಗಿಸಿ ಬೆಂಗಳೂರಿಗೆ ಮರಳಲು ವಿಶೇಷ ರೈಲು ವ್ಯವಸ್ಥೆ
ಕಾರವಾರ: ಯುಗಾದಿ ಹಬ್ಬದ ಸಂಭ್ರಮ ಮುಗಿಸಿ ಕರಾವಳಿಯಿಂದ ಮತ್ತೆ ಬೆಂಗಳೂರಿನತ್ತ ಮುಖ ಮಾಡಲಿರುವ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ವಿಶೇಷ ರೈಲು ಸೇವೆಯನ್ನು ಘೋಷಿಸಿದೆ. ಹಬ್ಬಕ್ಕೆ ಊರಿಗೆ ಬಂದಿದ್ದ ಸಾವಿರಾರು ಜನರಿಗೆ ವಾಪಾಸು ತೆರಳಲು ರೈಲುಗಳಲ್ಲಿ ಟಿಕೆಟ್ ಲಭ್ಯವಿಲ್ಲದ ಕಾರಣ ಉಂಟಾಗಿದ್ದ ಆತಂಕಕ್ಕೆ ಈಗ ತೆರೆ ಬಿದ್ದಿದೆ.

ಉಡುಪಿ-ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರ ವಿಶೇಷ ಮನವಿಯ ಮೇರೆಗೆ ಈ ರೈಲು ಸಂಚಾರ ಆರಂಭವಾಗುತ್ತಿದ್ದು, ಸೋಮವಾರದ ಕೆಲಸದ ಅವಧಿಗೆ ಸರಿಯಾಗಿ ಬೆಂಗಳೂರು ತಲುಪುವಂತೆ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ.
ಪ್ರಯಾಣದ ವೇಳಾಪಟ್ಟಿ (ದಿನಾಂಕ: 22-03-2026, ಭಾನುವಾರ) ಈ ವಿಶೇಷ ರೈಲು ಮಡಗಾಂವ್‌ನಿಂದ ಬೆಳಿಗ್ಗೆ 11:00 ಗಂಟೆಗೆ ಹೊರಡಲಿದ್ದು, ಕಾರವಾರಕ್ಕೆ 11:28, ಅಂಕೋಲಾಕ್ಕೆ 11:58, ಗೋಕರ್ಣ ರೋಡ್‌ಗೆ ಮಧ್ಯಾಹ್ನ 12:33, ಕುಮಟಕ್ಕೆ 12:50, ಹೊನ್ನಾವರಕ್ಕೆ 1:03, ಮುರ್ಡೇಶ್ವರಕ್ಕೆ 1:38, ಭಟ್ಕಳಕ್ಕೆ 1:53, ಬೈಂದೂರಿಗೆ 2:12, ಕುಂದಾಪುರಕ್ಕೆ 2:40 ಹಾಗೂ ಬಾರ್ಕೂರು ನಿಲ್ದಾಣಕ್ಕೆ 2:55ಕ್ಕೆ ತಲುಪಲಿದೆ. ಉಡುಪಿಯಿಂದ ಮಧ್ಯಾಹ್ನ 3:30ಕ್ಕೆ ಹೊರಡುವ ರೈಲು, ಮುಲ್ಕಿಗೆ 3:58, ಸುರತ್ಕಲ್‌ಗೆ 4:12, ಬಂಟ್ವಾಳಕ್ಕೆ ಸಂಜೆ 6:00, ಕಬಕ ಪುತ್ತೂರಿಗೆ 6:28 ಹಾಗೂ ಸುಬ್ರಹ್ಮಣ್ಯಕ್ಕೆ ರಾತ್ರಿ 7:50ಕ್ಕೆ ತಲುಪಲಿದೆ. ನಂತರ ಸಕಲೇಶಪುರಕ್ಕೆ ರಾತ್ರಿ 10:30, ಹಾಸನ ಜಂಕ್ಷನ್ ಗೆ 11:30, ಚನ್ನರಾಯಪಟ್ಟಣಕ್ಕೆ ಸೋಮವಾರ ಬೆಳಿಗ್ಗೆ 12:13, ಕುಣಿಗಲ್ ಗೆ 1:23 ಹಾಗೂ ಎಸ್‌ಎಂವಿಟಿ ಬೆಂಗಳೂರಿಗೆ 3:00ಕ್ಕೆ ತಲುಪಲಿದೆ. ಅಂತಿಮವಾಗಿ ಸೋಮವಾರ ಬೆಳಿಗ್ಗೆ 5:00 ಗಂಟೆಗೆ ಬೆಂಗಳೂರು ಕ್ಯಾಂಟೋನ್ಮೆಂಟ್ ನಿಲ್ದಾಣವನ್ನು ತಲುಪಲಿದೆ.
ಹಬ್ಬಕ್ಕೆ ಮುನ್ನ ಬೆಂಗಳೂರಿನಿಂದ ಕರಾವಳಿಗೆ ಬಂದಿದ್ದ ವಿಶೇಷ ರೈಲಿಗೆ 700ಕ್ಕೂ ಅಧಿಕ ಸೀಟುಗಳು ಭರ್ತಿಯಾಗುವ ಮೂಲಕ ನಿರೀಕ್ಷೆಗೂ ಮೀರಿದ ಸ್ಪಂದನೆ ಸಿಕ್ಕಿತ್ತು. ಈಗ ವಾಪಾಸು ತೆರಳುವಾಗಲೂ ಅದೇ ರೀತಿಯ ಬೇಡಿಕೆ ಇರುವುದರಿಂದ ಈ ವ್ಯವಸ್ಥೆ ಮಾಡಲಾಗಿದೆ.
ಭಾನುವಾರ ರಾತ್ರಿ ಪ್ರಯಾಣಿಸಿ ಸೋಮವಾರ ಮುಂಜಾನೆಯೇ ಬೆಂಗಳೂರು ತಲುಪುವುದರಿಂದ ಉದ್ಯೋಗಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ತಮ್ಮ ಕೆಲಸ ಕಾರ್ಯಗಳಿಗೆ ಹಾಜರಾಗಲು ಬಹಳ ಅನುಕೂಲವಾಗಲಿದೆ.
ಖಾಸಗಿ ಬಸ್ಸುಗಳ ದರ ಏರಿಕೆ ಮತ್ತು ಸೀಟುಗಳ ಕೊರತೆಯ ನಡುವೆ ಈ ರೈಲು ಸೇವೆ ವರದಾನವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಕೋರಲಾಗಿದೆ.
ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ಈ ಬಗ್ಗೆ ಮಾಹಿತಿ ನೀಡಿ, ಕರಾವಳಿ ಭಾಗದ ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿ ಈ ವಿಶೇಷ ರೈಲು ಒದಗಿಸಲಾಗಿದೆ, ಇದು ನಮ್ಮ ಜನರ ಸುಗಮ ಪ್ರಯಾಣಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.
