UK Express Logo

ಯಲ್ಲಾಪುರದಲ್ಲಿ ಭೀಕರ ಅಪಘಾತ; ಮೂವರು ಪ್ರಯಾಣಿಕರು ಸಾವು, ಹಲವರಿಗೆ ಗಾಯ

By UKExpress on 8/16/2025

Picsart-25-08-16-10-28-28-769 ಯಲ್ಲಾಪುರ: ಯಲ್ಲಾಪುರ ತಾಲೂಕಿನ ಹಿಟ್ಟಿನ ಬೈಲ ಬಳಿ ನಿಂತಿದ್ದ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಬಸ್ಸಿನಲ್ಲಿದ್ದ ಹಲವರಿಗೆ ಗಂಭೀರ ಗಾಯಗಳಾಗಿವೆ. ಘಟನೆ ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಸಂಭವಿಸಿದೆ.

ಮೃತಪಟ್ಟವರನ್ನು ನೀಲವ್ವ ಯಲಗುರ್ದಪ್ಪ ಹರದೊಳ್ಳಿ (ಬಾಗಲಕೋಟ ಜಿಲ್ಲೆಯ ಗುಳೇದಗುಡ್ಡ), ಗಿರಿಜವ್ವ ಅಯ್ಯಪ್ಪ ಬೂದನ್ನವರ (ಬಾದಾಮಿ ತಾಲೂಕಿನ ಜಾಲಿಹಾಳ) ಹಾಗೂ ಸುಮಾರು 45 ವರ್ಷದ ಅಪರಿಚಿತ ವ್ಯಕ್ತಿ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡ ರಮೇಶ್ ಚಂದಪ್ಪ ಕಿತ್ತಳಿ, ಅವರ ಮಗ ಚಿದಾನಂದ ಕಿತ್ತಳಿ, ಮಲ್ಲಪ್ಪ ಯಮನಪ್ಪ ಕತ್ತಿ, ಮಂಜುಳಾ ಗಾಳಪ್ಪ ಹಳಬರ, ಮಲ್ಲಿಕಾರ್ಜುನ ಅಂದಲ, ದೇವಕಿ ಬೆಳ್ಳಿ, ಸಮೀರಾ ಬೇಗಂ ಹಾಗೂ ಶರೀಫಾ ಬೇಗಂ ಅವರನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾಗಲಕೋಟ ಜಿಲ್ಲೆಯ ಅಮ್ಮಿನಗಡದಿಂದ ಧರ್ಮಸ್ಥಳಕ್ಕೆ ಪ್ರಯಾಣಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಿಟ್ಟಿನ ಬೈಲ ಬಳಿ ಯಾವುದೇ ರಸ್ತೆ ಸುರಕ್ಷಾ ಕ್ರಮವಿಲ್ಲದೆ, ಇಂಡಿಕೇಟರ್ ಹಾಕದೆ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.

ಅತೀ ವೇಗ ಮತ್ತು ಅಜಾಗರೂಕತೆಯಿಂದ ಬಸ್ ಚಲಾಯಿಸಿದ್ದು ಮತ್ತು ಸುರಕ್ಷತೆ ಕ್ರಮವಿಲ್ಲದೆ ರಸ್ತೆ ಬದಿಯಲ್ಲಿ ಲಾರಿ ನಿಲ್ಲಿಸಿದ್ದು ಘಟನೆಗೆ ಕಾರಣ ಎನ್ನಲಾಗಿದೆ. ಲಾರಿ ಮತ್ತು ಬಸ್ ಚಾಲಕ ಇಬ್ಬರ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.