ಕಾರವಾರ: ಕೃಷ್ಣ ಜನ್ಮಾಷ್ಟಮಿ ಹಬ್ಬದ ಅಂಗವಾಗಿ ಶನಿವಾರ ನಗರದ ರಾಧಾಕೃಷ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಮೊಸರು ಕುಡಿಕೆ ಒಡೆಯುವ ಸ್ಪರ್ಧೆ ನಡೆಯಿತು. ನೂರಾರು ಭಕ್ತರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಹಬ್ಬದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆಯಿಂದಲೇ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ದಿನವಿಡೀ ಭಜನಾ ಕಾರ್ಯಕ್ರಮಗಳು ನಡೆದಿದ್ದು, ದೇವಸ್ಥಾನದ ಸುತ್ತಲು ಪೂಜಾ ಸಾಮಗ್ರಿಗಳ ಅಂಗಡಿಗಳು ಸೇರಿದ್ದವು. ಸಂಜೆಯವರೆಗೂ ನಡೆದ ಪೂಜೆಗಳ ಬಳಿಕ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
Video:- https://www.facebook.com/share/v/1E2xKoxkKT/
ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ವತಿಯಿಂದ ಸಾಂಪ್ರದಾಯಿಕವಾಗಿ ಆಯೋಜಿಸಲಾಗಿದ್ದ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ ವಿಶೇಷ ಆಕರ್ಷಣೆಯಾಗಿತ್ತು. ಸಂಜೆಯ ವೇಳೆಗೆ ನಡೆದ ಈ ಸ್ಪರ್ಧೆಯನ್ನು ವೀಕ್ಷಿಸಲು ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದರು. ಸ್ಥಳೀಯ ಐದು ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಒಬ್ಬರ ಮೇಲೆ ಒಬ್ಬರು ಹತ್ತಿ ಮಾನವ ಪಿರಮಿಡ್ ರಚಿಸಿ, ಕ್ರೇನ್ ಮೂಲಕ ಎತ್ತರದಲ್ಲಿ ತೂಗುಹಾಕಿದ್ದ ಮೊಸರು ಕುಡಿಕೆಯನ್ನು ಒಡೆಯುವ ಮೂಲಕ ತಂಡಗಳು ತಮ್ಮ ಕೌಶಲ ಪ್ರದರ್ಶಿಸಿದವು. ತಂಡಗಳ ಕಸರತ್ತಿಗೆ ತಕ್ಕಂತೆ ಇದ್ದ ಸಂಗೀತ ಸಂಯೋಜನೆ ಪ್ರೇಕ್ಷಕರಿಗೆ ಹೆಚ್ಚಿನ ಮನರಂಜನೆ ನೀಡಿತು.