
ಕರಾವಳಿಗರ ಮೇಲೆ ಸರ್ಕಾರದ ಬರೆ...
ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಮಧ್ಯಭಾಗ ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಗಬೇಕು ಎನ್ನುವುದು ಹಳೆ ಕೂಗು. ಜಿಲ್ಲೆಯ ಹೋರಾಟಗಾರರು ಕೂಗುತ್ತಿದ್ದಾರೆಯೇ ಹೊರತು ಈ ವಿಷಯದಲ್ಲಿ ಸರ್ಕಾರ ಒಂದಿಂಚೂ ಚಲಿಸಿದಂತೆ ಕಾಣುತ್ತಿಲ್ಲ. ಸರ್ಕಾರ ಇಲ್ಲಿಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಂತೂ ಕೊಡಲಿಲ್ಲ. ಆದರೆ ಕನಿಷ್ಟ ಇಲ್ಲಿರುವ ತಾಲೂಕಾಸ್ಪತ್ರೆಗಾದರೂ ಒಂದಿಷ್ಟು ಹೆಚ್ಚುವರಿ ವೈದ್ಯರ ಸೇವೆ ಕಲ್ಪಿಸಬೇಕಿತ್ತಲ್ಲವೇ? ಆದರೆ ಸರ್ಕಾರ ಬೇರೆಯೇ ಹೆಜ್ಜೆಯಿಟ್ಟಿದ್ದು, ಇಲ್ಲಿರುವ ವೈದ್ಯರನ್ನೇ ವರ್ಗಾವಣೆ ಮಾಡಲು ಸಜ್ಜಾಗಿದೆ.
ಈಗಾಗಲೇ ಸರ್ಕಾರದ ಆರೋಗ್ಯ ಇಲಾಖೆ ವರ್ಗಾವಣೆ ಪಟ್ಟಿ ಸಿದ್ಧಪಡಿಸಿಕೊಂಡಿದ್ದು, ಕುಮಟಾ ಸರ್ಕಾರಿ ಆಸ್ಪತ್ರೆಯ ಐವರು ವೈದ್ಯರನ್ನು ವರ್ಗಾವಣೆ ಮಾಡಲು ಕೌನ್ಸಿಲಿಂಗಿಗೆ ತಯಾರಿ ನಡೆಸಿದೆ. ಕುಮಟಾ ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಗಣೇಶ್, ಎಲುಬು ತಜ್ಞ ಡಾ. ಸದಾನಂದ ಪೈ, ಚರ್ಮ ರೋಗ ತಜ್ಞೆ ಡಾ. ಸುಮಲತಾ, ಶಸ್ತ್ರ ಚಿಕಿತ್ಸಾ ತಜ್ಞ ಡಾ. ಪಾಂಡುರಂಗ ದೇವಾಡಿಗ ಹಾಗೂ ದಂತ ವೈದ್ಯ ಡಾ. ಕೇಶವ ಭಟ್ ಇವರು ಸರ್ಕಾರದ ವರ್ಗಾವಣೆ ಪಟ್ಟಿಯಲ್ಲಿದ್ದಾರೆ.
ಮೊದಲೇ ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ನಿಜಕ್ಕೂ ಇಲ್ಲಿಗೆ ಹೆಚ್ಚುವರಿ ವೈದ್ಯರ ಅಗತ್ಯತೆ ಇದೆ. ಆದರೆ ಸರ್ಕಾರ ``ಜನ ಮರುಳೋ, ಜಾತ್ರೆ ಮರುಳೋ'' ಎನ್ನುವಂತೆ ಇಲ್ಲಿನ ತಜ್ಞ ವೈದ್ಯರನ್ನು ವರ್ಗಾಯಿಸಲು ಸಿದ್ಧತೆ ನಡೆಸಿದ್ದು, ಮುಂದೆ ಜನರ ಕೆಂಗಣ್ಣಿಗೆ ಗುರಿಯಾಗಲಿದೆ.