UK Express Logo

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗಕ್ಕೆ ಹಸಿರು ನಿಶಾನೆ: ಕರಾವಳಿ ಜನರ ದಶಕಗಳ ಕನಸು ನನಸು

By UKExpress on 7/27/2025

Picsart-25-07-27-16-02-58-577

ಕಾರವಾರ: ಉತ್ತರ ಕರ್ನಾಟಕ ಮತ್ತು ಕರಾವಳಿಯನ್ನು ಸಂಪರ್ಕಿಸುವ ಬಹುನಿರೀಕ್ಷಿತ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗಕ್ಕೆ ಕೇಂದ್ರ ಸರ್ಕಾರದಿಂದ ಅನುಮೋದನೆ ದೊರೆತಿದೆ. ಸಂಸತ್ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ನಡೆದ ಪ್ರಶೋತ್ತರ ಕಲಾಪದ ವೇಳೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಕರ್ನಾಟಕದಲ್ಲಿ ಮಂಜೂರಾಗಲಿರುವ ₹42 ಸಾವಿರ ಕೋಟಿಗೂ ಹೆಚ್ಚು ವೆಚ್ಚದ ವಿವಿಧ ಯೋಜನೆಗಳಲ್ಲಿ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಯೂ ಸೇರಿರುವುದಾಗಿ ತಿಳಿಸಿದ್ದು, ಇದು ಕರಾವಳಿ ಜಿಲ್ಲೆಯಲ್ಲಿ ಭಾರಿ ಸಂಚಲನ ಮೂಡಿಸಿದೆ.

ದಶಕಗಳ ಹೋರಾಟಕ್ಕೆ ದೊರೆತ ಫಲ

ಸುಮಾರು ಎರಡೂವರೆ ದಶಕಗಳಿಗೂ ಹೆಚ್ಚು ಕಾಲದಿಂದ ನೆನೆಗುದಿಗೆ ಬಿದ್ದಿದ್ದ ಈ ಯೋಜನೆಯ ಅನುಷ್ಠಾನಕ್ಕಾಗಿ ಸಾರ್ವಜನಿಕರು, ಹೋರಾಟಗಾರರು ಮತ್ತು ರಾಜಕೀಯ ನಾಯಕರು ಸುದೀರ್ಘ ಕಾನೂನು ಹೋರಾಟ ಹಾಗೂ ಜನಪರ ಪ್ರತಿಭಟನೆಗಳನ್ನು ನಡೆಸಿದ್ದರು. ರಮಾನಂದ ನಾಯಕ, ರಾಜೀವ ಗಾಂವಕರ, ಜಾರ್ಜ್‌ ಫರ್ನಾಂಡಿಸ್, ವಿಠ್ಠಲದಾಸ ಕಾಮತ್ ಸೇರಿದಂತೆ ಹಲವರು ಈ ಯೋಜನೆಗಾಗಿ ನಿರಂತರವಾಗಿ ಶ್ರಮಿಸಿದ್ದರು. ಹೈಕೋರ್ಟ್ ನ್ಯಾಯವಾದಿ ಆರ್.ಜಿ. ಕೊಲ್ಲೆ ಅವರು ನ್ಯಾಯಾಲಯದಲ್ಲಿ ಈ ಯೋಜನೆಯ ಪರವಾಗಿ ವಾದ ಮಂಡಿಸಿ ಗಮನ ಸೆಳೆದಿದ್ದರು. ಈ ಹೋರಾಟಕ್ಕೆ ಕೊನೆಗೂ ನ್ಯಾಯ ಸಿಕ್ಕಂತಾಗಿದೆ ಎಂದು ಪತ್ರಕರ್ತ ಹಾಗೂ ಹೋರಾಟಗಾರ ವಿಠ್ಠಲದಾಸ ಕಾಮತ್ ಸಂತಸ ವ್ಯಕ್ತಪಡಿಸಿನಿವಾರಣೆ

ಯೋಜನೆಗೆ ಎದುರಾಗಿದ್ದ ಅಡೆತಡೆಗಳು ನಿವಾರಣೆ

1999ರಲ್ಲಿ ₹494 ಕೋಟಿ ವೆಚ್ಚದ ಈ ಯೋಜನೆಗೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಚಾಲನೆ ನೀಡಿದ್ದರು. ಹುಬ್ಬಳ್ಳಿಯಿಂದ ಕಲಘಟಗಿವರೆಗೆ 34 ಕಿ.ಮೀ. ಉದ್ದದ ರೈಲು ಮಾರ್ಗವೂ ನಿರ್ಮಾಣಗೊಂಡಿತ್ತು. ಆದರೆ, ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರಕ್ಕೆ ಹಾನಿಯಾಗಲಿದೆ ಎಂಬ ಪರಿಸರವಾದಿ ಸಂಘಟನೆಗಳ ಆಕ್ಷೇಪಣೆಯಿಂದಾಗಿ ಯೋಜನೆ ಕಳೆದ ಮೂರು ದಶಕಗಳಿಂದ ನನೆಗುದಿಗೆ ಬಿದ್ದಿತ್ತು. ರಾಷ್ಟ್ರೀಯ ಹಸಿರು ಪೀಠ (ಎನ್‌ಜಿಟಿ) 2016ರಲ್ಲಿ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಯೋಜನೆ ಕಾರ್ಯಗತಗೊಳಿಸಲು ಅಭ್ಯಂತರವಿಲ್ಲ ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಪರಿಸರವಾದಿಗಳು, 2024ರಲ್ಲಿ ಹೈಕೋರ್ಟ್‌ನಿಂದ ವನ್ಯಜೀವಿ ಮಂಡಳಿ ಸಹಾಯದೊಂದಿಗೆ ಅಧ್ಯಯನ ನಡೆಸಿ, ಪರಿಷ್ಕೃತ ಯೋಜನಾ ವರದಿ ಸಲ್ಲಿಸುವಂತೆ ಸೂಚಿಸಿತ್ತು.

ನೈರುತ್ಯ ರೈಲ್ವೆ, ಉದ್ದೇಶಿತ ಮಾರ್ಗದಲ್ಲಿ ಮರು ಸಮೀಕ್ಷೆ ನಡೆಸಿ, ಫೆಬ್ರವರಿ 17ರಂದು ಕೇಂದ್ರ ರೈಲ್ವೆ ಮಂಡಳಿಗೆ ಪರಿಷ್ಕೃತ ಯೋಜನಾ ವರದಿ (DPR) ಸಲ್ಲಿಸಿತ್ತು. ಡೆಹರಾಡೂನ್‌ನ ಭಾರತೀಯ ವನ್ಯಜೀವಿ ಸಂಸ್ಥೆ ವನ್ಯಜೀವಿಗಳ ಕುರಿತು ಪ್ರತ್ಯೇಕ ಅಧ್ಯಯನ ನಡೆಸಿ ವರದಿ ನೀಡಿತ್ತು.

ಪರಿಷ್ಕೃತ ಯೋಜನಾ ವರದಿಯ ಪ್ರಮುಖ ಅಂಶಗಳು

  • ಯೋಜನೆಗೆ ಒಟ್ಟು ₹17,147 ಕೋಟಿ ವೆಚ್ಚ ಅಂದಾಜಿಸಲಾಗಿದೆ.
  • 595 ಹೆಕ್ಟೇರ್ ಬದಲಿಗೆ 585 ಹೆಕ್ಟೇರ್ ಅರಣ್ಯ ಭೂಮಿ ಮಾತ್ರ ಬಳಕೆಯಾಗಲಿದೆ.
  • ದ್ವಿಪಥ ರೈಲು ಮಾರ್ಗವು ರಾಷ್ಟ್ರೀಯ ಹೆದ್ದಾರಿ-63ರ ಪಕ್ಕದಲ್ಲೇ ಸಾಗಲಿದೆ.
  • 164.4 ಕಿ.ಮೀ. ಉದ್ದದ ಮಾರ್ಗದಲ್ಲಿ 97 ಕಿ.ಮೀ. ಅರಣ್ಯ ಪ್ರದೇಶದಲ್ಲಿ ಹಾದುಹೋಗಲಿದೆ.
  • ಅರಣ್ಯದಲ್ಲಿ ಹಾದುಹೋಗುವ ಮಾರ್ಗದಲ್ಲಿ 57 ಸುರಂಗಗಳ ನಿರ್ಮಾಣಕ್ಕೆ ಪ್ರಸ್ತಾವನೆ.
  • ಯಲ್ಲಾಪುರ-ಸುಂಕಸಾಳ ನಡುವಿನ ಅರಣ್ಯದಲ್ಲಿ 13.89 ಕಿ.ಮೀ. ಉದ್ದದ ಮೇಲ್ಸೇತುವೆ ನಿರ್ಮಾಣ.

ಜನಪ್ರತಿನಿಧಿಗಳಿಂದ ಸಂತಸ

ರೈಲ್ವೆ ಸಚಿವರ ಹೇಳಿಕೆಯಿಂದ ಯೋಜನೆಗೆ ಇದ್ದ ಎಲ್ಲ ಅಡೆತಡೆಗಳು ನಿವಾರಣೆಯಾಗಿವೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೈಕೋರ್ಟ್ ನ್ಯಾಯವಾದಿ ಆರ್.ಜಿ. ಕೊಲ್ಲೆ ಸಹ ಈ ಘೋಷಣೆಯಿಂದ ಆತಂಕ ನಿವಾರಣೆಯಾಗಿದೆ ಎಂದಿದ್ದಾರೆ. ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಕಾರವಾರ-ಅಂಕೋಲಾ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಅವರು, ಇದು ಈ ಭಾಗದ ಬಹುಕಾಲದ ಬೇಡಿಕೆಯಾಗಿದ್ದು, ಜನತೆಯ ಹೋರಾಟಕ್ಕೆ ಸಂದ ಜಯ ಎಂದಿದ್ದಾರೆ. ಈ ಯೋಜನೆ ಮಂಜೂರಿಗೆ ಕಾರಣರಾದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ, ಮತ್ತು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಸಹ ಕೇಂದ್ರ ಸಚಿವರ ಸಕಾರಾತ್ಮಕ ಉತ್ತರ ಹೊಸ ವಿಶ್ವಾಸ ಮೂಡಿಸಿದ್ದು, ಜಿಲ್ಲೆಯ ಜನರ ಬೇಡಿಕೆಗೆ ಸ್ಪಂದನೆ ಸಿಗುವ ದಿನ ಹತ್ತಿರವಾಗಿದೆ ಎಂದಿದ್ದಾರೆ.

ಕರಾವಳಿಯನ್ನು ರಾಜ್ಯದ ವಾಣಿಜ್ಯ ನಗರಿ ಹುಬ್ಬಳ್ಳಿ ಮತ್ತು ರಾಜಧಾನಿ ಬೆಂಗಳೂರಿಗೆ ಬೆಸೆಯುವ ಈ ಮಾರ್ಗವು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಮುಖ ಕೊಡುಗೆ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.