ಜೊಯಿಡಾ: ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ದೇವಾಳಿ ಬಳಿ ಲೋಂಡಾ-ವಾಸ್ಕೋ ರೈಲ್ವೆ ಮಾರ್ಗದಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಬಹುದಾಗಿದ್ದ ಭಾರಿ ರೈಲು ದುರಂತವೊಂದು ನೈಋತ್ಯ ರೈಲ್ವೆಯ ಗಸ್ತು ಸಿಬ್ಬಂದಿ ಓಂ ಪ್ರಕಾಶ್ ತರಿಚೆ ಅವರ ಅಪ್ರತಿಮ ಧೈರ್ಯ ಮತ್ತು ಸಮಯಪ್ರಜ್ಞೆಯಿಂದ ತಪ್ಪಿದೆ. ಹಳಿ ಮೇಲೆ ಬಿದ್ದಿದ್ದ ಭಾರೀ ಮರ ಮತ್ತು ವಿದ್ಯುತ್ ಕಂಬದಿಂದ ಉಂಟಾಗಬಹುದಾಗಿದ್ದ ದೊಡ್ಡ ಅನಾಹುತವನ್ನು ಅರಿತ ಓಂ ಪ್ರಕಾಶ್, ಪ್ರಾಣದ ಹಂಗು ತೊರೆದು ಓಡಿಹೋಗಿ ಗೂಡ್ಸ್ ರೈಲನ್ನು ನಿಲ್ಲಿಸಿ ನೂರಾರು ಜನರ ಜೀವ ಉಳಿಸಿದ್ದಾರೆ.
ಘಟನೆಯ ವಿವರ: ಶನಿವಾರ ರಾತ್ರಿ ತಮ್ಮ ಎಂದಿನ ಗಸ್ತು ಕಾರ್ಯ ನಿರ್ವಹಿಸಿ ಭಾನುವಾರ ಬೆಳಿಗ್ಗೆ ಹಿಂತಿರುಗುತ್ತಿದ್ದಾಗ, ಓಂ ಪ್ರಕಾಶ್ ಅವರಿಗೆ ಹಠಾತ್ ಜೋರಾದ ಶಬ್ದವೊಂದು ಕೇಳಿಸಿತು. ತಕ್ಷಣ ಹಿಂತಿರುಗಿ ಪರಿಶೀಲಿಸಿದಾಗ, ರೈಲ್ವೆ ಹಳಿಗೆ ಅಡ್ಡಲಾಗಿ ದೊಡ್ಡ ಮರ ಮತ್ತು ಮುರಿದ ವಿದ್ಯುತ್ ಕಂಬ ಬಿದ್ದಿರುವುದು ಗೋಚರಿಸಿತು. ಆ ಸ್ಥಳದಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲದ ಕಾರಣ ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಲಾಗಲಿಲ್ಲ. ಅಷ್ಟರಲ್ಲಾಗಲೇ, ಗೋವಾದಿಂದ ಕರ್ನಾಟಕಕ್ಕೆ ಬರುತ್ತಿದ್ದ ಗೂಡ್ಸ್ ರೈಲೊಂದು ಅದೇ ಮಾರ್ಗದಲ್ಲಿ ವೇಗವಾಗಿ ಬರುತ್ತಿರುವುದು ಕಂಡುಬಂದಿತು.
ಪ್ರಾಣದ ಹಂಗು ತೊರೆದು ಸಾಹಸ
ಯಾವುದೇ ಸಮಯ ವ್ಯರ್ಥ ಮಾಡದೆ, ಓಂ ಪ್ರಕಾಶ್ ಅವರು ತಮ್ಮ ಪ್ರಾಣದ ಹಂಗು ತೊರೆದು ತಕ್ಷಣವೇ ಕ್ಯಾಸಲರಾಕ್ ಕಡೆಗೆ ಓಡಿ, ಬರುತ್ತಿದ್ದ ರೈಲನ್ನು ತಡೆಯಲು ಪ್ರಯತ್ನಿಸಿದರು. ಈ ಸಾಹಸದ ನಡುವೆ ಓಡುವಾಗ ಅವರು ರೈಲ್ವೆ ಟ್ರ್ಯಾಕ್ ಮೇಲೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ವೇಳೆ ಅವರ ಎರಡು ಹಲ್ಲುಗಳು ಮುರಿದಿದ್ದು, ತಕ್ಷಣ ಅವರನ್ನು ರಾಮನಗರದ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಓಂ ಪ್ರಕಾಶ್‌ಗೆ ಅಭಿನಂದನೆ
ರೈಲ್ವೆ ಸಿಬ್ಬಂದಿ ಓಂ ಪ್ರಕಾಶ್ ಅವರ ಈ ನಿಸ್ವಾರ್ಥ ಸಮಯಪ್ರಜ್ಞೆ, ಧೈರ್ಯ ಮತ್ತು ಸೇವಾ ಮನೋಭಾವಕ್ಕೆ ಸಾರ್ವಜನಿಕರು ಹಾಗೂ ರೈಲ್ವೆ ಇಲಾಖೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದೆ. ಗಾಯಗೊಂಡಿದ್ದರೂ ಪ್ರಾಣದ ಹಂಗು ತೊರೆದು ರೈಲು ನಿಲ್ಲಿಸುವ ಮೂಲಕ ಅವರು ತೋರಿದ ಈ ಸಾಹಸಮಯ ಕಾರ್ಯವು ಭವಿಷ್ಯದಲ್ಲಿ ಅನೇಕರಿಗೆ ಪ್ರೇರಣೆಯಾಗಲಿದೆ ಎಂದು ಇಲಾಖೆ ಶ್ಲಾಘಿಸಿದೆ. ಕರ್ತವ್ಯನಿಷ್ಠೆಯ ಪರಾಕಾಷ್ಠೆ ತೋರಿದ ಓಂ ಪ್ರಕಾಶ್ ಅವರ ಬದ್ಧತೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.