ಭಟ್ಕಳ: ತಾಲೂಕಿನ ಕುಂಟವಾಣಿ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಟ (ಅಂದರ್-ಬಾಹರ್) ನಡೆಸುತ್ತಿದ್ದ 8 ಮಂದಿಯನ್ನು ಭಟ್ಕಳ ಗ್ರಾಮೀಣ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಬಂಧಿತರಿಂದ ಜೂಜಾಟಕ್ಕೆ ಬಳಸಲಾದ ₹4,05,010 ಮೌಲ್ಯದ ನಗದು ಹಾಗೂ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜುಲೈ 25ರ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಆರೋಪಿಗಳು ಹಣಗಳಿಸುವ ಉದ್ದೇಶದಿಂದ ಸಂಘಟಿತವಾಗಿ ಜೂಜಾಟ ನಡೆಸುತ್ತಿದ್ದರು. ಈ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ ಭಟ್ಕಳ ಗ್ರಾಮೀಣ ಠಾಣೆಯ ಸಿಪಿಐ ಮಂಜುನಾಥ ಲಿಂಗಾರೆಡ್ಡಿ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿ, ಜೂಜುಕೋರರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದೆ.
ಬಂಧಿತ ಆರೋಪಿಗಳನ್ನು ಕುಂಟವಾಣಿ ನಿವಾಸಿಗಳಾದ ಮಹೇಶ್ ಕೃಷ್ಣ ಭಂಡಾರಿ (30), ವಿನಾಯಕ ಮಂಜುನಾಥ ದೇಶಭಂಡಾರಿ (26), ರವಿ ನಾಗೇಶ ಭಂಡಾರಿ (36), ಮಹೇಶ್ ಪುಂಡ್ಲಿಕ ಭಂಡಾರಿ (29), ಸಂತೋಷ ಕರಿಯಾ ಗೊಂಡ (25) ಹಾಗೂ ಮಾರುಕೇರಿ ನಿವಾಸಿಗಳಾದ ಮಂಜುನಾಥ ಸುಕ್ರ ಗೊಂಡ (31), ರವಿ ಸಣ್ಣು ಗೊಂಡ (31) ಮತ್ತು ವಾಸುದೇವ ತಿಮ್ಮಪ್ಪ ಗೊಂಡ (27) ಎಂದು ಗುರುತಿಸಲಾಗಿದೆ. ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.