UK Express Logo

ಸಾರ್ವಜನಿಕರಿಗೆ ಸಂಕಷ್ಟ ತಂದ ಕುಮಟಾ–ಶಿರಸಿ ರಸ್ತೆ ಕಾಮಗಾರಿ ವಿಳಂಬ: ಆರ್.ಎನ್.ಎಸ್ ಕಂಪನಿ ವಿರುದ್ಧ ಆಕ್ರೋಶ

By UKExpress on 12/10/2025
Featured Image ಕುಮಟಾ: ಕುಮಟಾ–ಶಿರಸಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಆಮೆ ವೇಗದಲ್ಲಿ ಸಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಉಂಟಾಗುತ್ತಿರುವ ತೊಂದರೆಯನ್ನು ಖಂಡಿಸಿ ಕತಗಾಲದಲ್ಲಿ ಆರ್‌ಎನ್‌ಎಸ್ (RNS) ಕಂಪನಿ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

ಹೆದ್ದಾರಿ ಕಾಮಗಾರಿಯ ಅತಿಯಾದ ವಿಳಂಬದಿಂದಾಗಿ ನಿತ್ಯ ಸಂಚರಿಸುವ ಪ್ರಯಾಣಿಕರು ಪರದಾಡುವಂತಾಗಿದೆ. ವಿಶೇಷವಾಗಿ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳುವ ರೋಗಿಗಳು ಮತ್ತು ದೇಶದ ವಿವಿಧ ಭಾಗಗಳಿಂದ ಇಲ್ಲಿನ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರಿಗೆ ಹದಗೆಟ್ಟ ರಸ್ತೆಯಿಂದಾಗಿ ಗಂಭೀರ ಸಮಸ್ಯೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಧರಣಿ ನಡೆಸಿದ ಮುಖಂಡರು, ಆರ್‌ಎನ್‌ಎಸ್ ಕಂಪನಿ ಪ್ರತಿನಿಧಿಗಳು, ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರಿಗೆ (Project Director) ಎಚ್ಚರಿಕೆ ನೀಡಿದರು. ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಆದಷ್ಟು ಶೀಘ್ರವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕುಮಟಾ–ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಮಂಜುನಾಥ್ ಎಲ್. ನಾಯ್ಕ, ಕನ್ನಡಪರ ಹೋರಾಟಗಾರರಾದ ಭಾಸ್ಕರ್ ಪಟಗಾರ, ವಿಕ್ರಂ ನಾಯ್ಕ ,ಜಿ ಎನ್ ಗೌಡ ,ಪ್ರಭಾಕರ ಪಟಗಾರ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.