ಕುಮಟಾ -ಅಘನಾಶಿನಿ ಮುಖ್ಯ ರಸ್ತೆ ಹೊಂಡಗಳಿಗೆ 'ಬೆಳಕು' ಬಳಗದಿಂದ ತಾತ್ಕಾಲಿಕ ಪರಿಹಾರ; ಶಾಶ್ವತ ದುರಸ್ತಿಗೆ ಇಲಾಖೆಗೆ ಆಗ್ರಹ
ಕುಮಟಾ: ಕುಮಟಾ ಪಟ್ಟಣದಿಂದ ಅಘನಾಶಿನಿ ಕಡೆಗೆ ಸಾಗುವ ಮುಖ್ಯ ರಸ್ತೆಯ ಅನಾಥ ಹೊಂಡಗಳಿಗೆ 'ಬೆಳಕು' ಗೆಳೆಯರ ಬಳಗ ಚಿತ್ರಿಗಿ ತಂಡ ಭಾನುವಾರ, ಜುಲೈ 27, 2025 ರಂದು ತಾತ್ಕಾಲಿಕ ಪರಿಹಾರ ಒದಗಿಸಿದೆ. ವಾಹನ ಸವಾರರು ಅನುಭವಿಸುತ್ತಿದ್ದ ಕಷ್ಟವನ್ನು ಅರಿತು, ಗ್ರಾಮಸ್ಥರು, ವಿದ್ಯಾರ್ಥಿಗಳು ಮತ್ತು ಯುವಕರ ಸಹಭಾಗಿತ್ವದಲ್ಲಿ ಬಳಗದ ಸದಸ್ಯರು ಹೊಂಡಗಳನ್ನು ಮುಚ್ಚುವ ಕಾರ್ಯ ಕೈಗೊಂಡರು.
ಬೆಳಿಗ್ಗೆ 5:50ಕ್ಕೆ ಮೂಡಗಣಪತಿ ದೇವಸ್ಥಾನದ ಬಳಿಯಿಂದ ಆರಂಭವಾದ ಈ ರಸ್ತೆ ದುರಸ್ತಿ ಕಾರ್ಯದಲ್ಲಿ, ತಂಡವು ಕುಮಟಾ-ಅಘನಾಶಿನಿ ಮುಖ್ಯ ರಸ್ತೆಯಲ್ಲಿರುವ ಕಲ್ಸಂಕ, ಚಿತ್ರಿಗಿ ಉದ್ಯಾನವನ ಕ್ರಾಸ್, ಚಿತ್ರಿಗಿ ಹೈಸ್ಕೂಲ್ ಬಳಿ ಮತ್ತು ಗಣಪತಿ ದೇವಸ್ಥಾನದ ಬಳಿ ರಸ್ತೆಯಲ್ಲಿದ್ದ ಹೊಂಡಗಳನ್ನು ಮುಚ್ಚಿದರು.
ಸ್ಥಳಿಯ ಆಡಳಿತದವರ ಗಮನಕ್ಕೆ ಬಂದಿದ್ದರೂ ಯಾವುದೇ ಸ್ಪಂದನೆ ದೊರೆಯದ ಕಾರಣ, "ನಮ್ಮೂರಿನ ತುರ್ತು ರಸ್ತೆ ರಿಪೇರಿ ನಮ್ಮದೇ" ಎಂಬ ಧ್ಯೇಯದೊಂದಿಗೆ 'ಬೆಳಕು' ಬಳಗವೇ ಈ ಜವಾಬ್ದಾರಿಯನ್ನು ಹೊತ್ತುಕೊಂಡು ಶ್ರಮಾದಾನ ಮಾಡಿದರು
'ಬೆಳಕು' ಬಳಗದ ವಿನಂತಿ:
'ಬೆಳಕು' ಚಿತ್ರಿಗಿ ಬಳಗವು ಕೈಗೊಂಡಿರುವ ಈ ಕಾರ್ಯ ಕೇವಲ ತಾತ್ಕಾಲಿಕ ಪರಿಹಾರ ಮಾತ್ರವಾಗಿದೆ. ವಾಹನ ಸವಾರರು ಸುಗಮವಾಗಿ ಸಂಚರಿಸುವಂತೆ ಮಾಡುವ ಸದುದ್ದೇಶದಿಂದ ಈ ಕಾರ್ಯ ಮಾಡಲಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಸಂಬಂಧಿಸಿದ ಇಲಾಖೆಗಳು ರಸ್ತೆಯ ಶಾಶ್ವತ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಬಳಗದ ಸದಸ್ಯರು ಮತ್ತು ಗ್ರಾಮಸ್ಥರು ವಿನಂತಿಸಿದ್ದಾರೆ.
ಸಮಾಜಮುಖಿ ಕೆಲಸಗಳಲ್ಲಿ ಸದಾ ಮುಂದಿರುವ 'ಬೆಳಕು' ಬಳಗದ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಸಮಾಜ ಸೇವೆಗೆ ಸಹಕಾರ ನೀಡಿದವರಿಗೆ ಕೃತಜ್ಞತೆ
ಹಳಕಾರದ PWD ಗುತ್ತಿಗೆದಾರರಾದ ಶ್ರೀ ಗಜಾನನ S ಗುನಗಾ ಅವರು ರಸ್ತೆಗೆ 80 ರಿಂದ 100 ಬುಟ್ಟಿ ಗ್ರಿಟ್ ಪೌಡರ್ ನೀಡಿರುತ್ತಾರೆ. ಪುರಸಭೆ ಮಾಜಿ ಅಧ್ಯಕ್ಷರಾದ ಶ್ರೀಮತಿ ದಾಕ್ಷಾಯಣಿ ಆರಿಗ್ ಚಿತ್ರಿಗಿ ಅವರು 70 ರಿಂದ 100 ಚಿರೆ ಕಲ್ಲುಗಳನ್ನು ಒದಗಿಸಿದ್ದಾರೆ. ಅಲ್ಲದೆ, ಶ್ರೀ ನಾಗೇಶ್ ನಾಯ್ಕ್ ಅವರು ಯಾವುದೇ ಸ್ವಾರ್ಥವಿಲ್ಲದೆ ತಮ್ಮ ಲಗೇಜ್ ರಿಕ್ಷಾವನ್ನು ತಂಡಕ್ಕೆ ನೀಡಿ ಸಹಕರಿಸಿದ್ದಾರೆ. ಅದೇ ರೀತಿ, ನಮ್ಮ ತಂಡದ ಕೆಲಸಕ್ಕೆ ಕುಮಟಾ-ಅಘನಾಶಿನಿ KSRTC ಚಾಲಕರು ನೀರಿನ ಬಾಟಲಿ ಮತ್ತು ಸಮೋಸ (ತಿಂಡಿ) ನೀಡಿರುತ್ತಾರೆ .ಈ ಸಮಾಜ ಸೇವೆ ಕಾರ್ಯಕ್ಕೆ ಸಹಕಾರ ನೀಡಿದ ಎಲ್ಲರಿಗೂ 'ಬೆಳಕು' ಬಳಗದ ಪರವಾಗಿ ಧನ್ಯವಾದಗಳನ್ನು ಸದಸ್ಯರು ಸಲ್ಲಿಸಿದ್ದಾರೆ.