UK Express Logo

ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಹೆಚ್ಚಿಸಲು ಕಮ್ಮಟಗಳು ಮಹತ್ವದ ಅಧ್ಯಾಯ: ಎಚ್.ಎನ್.ನಾಯ್ಕ

By UKExpress on 6/10/2025
Image 1

ಕುಮಟಾ : ಪಟ್ಟಣದ ಕಮಲಾ ಬಾಳಿಗಾ ಪ್ರಶಿಕ್ಷಣ ಮಹಾವಿದ್ಯಾಲಯದಲ್ಲಿ ಸವಿ ಫೌಂಡೇಶನ್ ಮೂಡಬಿದ್ರೆ-ಹಿರೇಗುತ್ತಿ ಮತ್ತು ಕಮಲಾ ಬಾಳಿಗಾ ಪ್ರಶಿಕ್ಷಣ ಮಹಾವಿದ್ಯಾಲಯ ಕುಮಟಾದ ಸಾಹಿತ್ಯ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಕಾವ್ಯಕಮ್ಮಟ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆನಕ ಕನಸ್ಟನ್ಸಿ ಮುಖ್ಯಸ್ಥ ಎಚ್ ಎನ್ ನಾಯ್ಕ ಅವರು, ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಹೆಚ್ಚಿಸಲು ಹಮ್ಮಿಕೊಂಡ ಇಂತಹ ಕಮ್ಮಟಗಳು ಅವರ ಬದುಕಿನ ಪುಟಗಳಲ್ಲಿ ಮಹತ್ವದ ಅಧ್ಯಾಯಗಳಾಗಿ ದಾಖಲಾಗುತ್ತವೆ. ಸಾಹಿತ್ಯರಚನೆಗೆ ಅಡಿಪಾಯ ಹಾಕುವ ಅಪರೂಪದ ಇಂತಹ ಕಮ್ಮಟಗಳ ಸಂಯೋಜನೆಯೇ ತನಗೆ ಆನಂದವನ್ನು ತಂದಿದೆ ಎಂದರು.

ಹಿರಿಯ ಕವಿ ಬೀರಣ್ಣ ನಾಯಕ ಮಾತನಾಡಿ, ಚುಟುಕು ರಚನೆಯ ಸರಳ ಸ್ವರೂಪ ಮತ್ತು ಕೌಶಲ್ಯಗಳನ್ನು ತಮ್ಮದೇ ಸ್ವರಚಿತ ಚುಟುಕುಗಳನ್ನು ಉದಾಹರಿಸುತ್ತಾ, ಸಾಹಿತ್ಯವಿರುವುದೇ ಸ್ವಸಂತೋಷಕ್ಕಾಗಿ ಎಂದು ವಿವರಿಸಿದರು. ಮುಕ್ತಕಗಳ ಕವಿಯೆಂದೇ ಹೆಸರಾದ ಕವಿ-ಕಲಾವಿದ ಗಣಪತಿ ಹೆಗಡೆ ಕೊಂಡದಕುಳಿ ಮುಕ್ತಕಗಳನ್ನು ಪ್ರಸ್ತುತ ಪಡಿಸುತ್ತಾ ಅವುಗಳ ರಚನೆಯನ್ನು ಮನದಟ್ಟುಗೊಳಿಸಿದರು. ಬರಹಗಾರ ಎನ್ ಆರ್ ಗಜು ಅವರು, ಉತ್ತೇಜಿಸಿ ಸ್ಥಳದಲ್ಲಿಯೇ ವಸ್ತು ವೈವಿಧ್ಯತೆಯೊಂದಿಗೆ ಕವನ ರಚನಾ ಗ್ರಹಿಕೆಗಳನ್ನು ಪ್ರೇರೇಪಿಸಿ ಕವಿಗೋಷ್ಠಿಯನ್ನು ನಡೆಸಿಕೊಟ್ಟರು.

ಕಮಲಾ ಬಾಳಿಗಾ ಕಾಲೇಜಿನ ಪ್ರಾಚಾರ್ಯೆ ಪ್ರೀತಿ ಭಂಡಾರಕರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕವರ್ಗದವರೇ ಅತ್ಯಧಿಕ ಸಂಖ್ಯೆಯಲ್ಲಿ ಸಾಹಿತಿಗಳಾಗಿರುವುದನ್ನು ಉಲ್ಲೇಖಿಸುತ್ತಾ, ತಮ್ಮ ಕಾಲೇಜಿನ ಸಾಹಿತ್ಯ ವೇದಿಕೆಯಡಿ ನಡೆದ ಈ ಕಾರ್ಯಕ್ರಮ ಹೊಸ ಸಾಹಿತಿಗಳ ಸೃಷ್ಠಿಗೆ ನಾಂದಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಸಿವಿಲ್ ಎಂಜಿನೀರಿAಗ್ ಕ್ಷೇತ್ರದಲ್ಲಿ ಅಪಾರ ಸಾಧನೆಗೈದ ಎಚ್ ಎನ್ ನಾಯ್ಕ ಹಾಗೂ ಗುರುಶ್ರೇಷ್ಠ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ಎನ್ ರಾಮು ಹಿರೇಗುತ್ತಿ ಅವರನ್ನು ಸನ್ಮಾನಿಸಲಾಯಿತು.

ನಿವೃತ್ತ ಪೋಲಿಸ್ ಅಧೀಕ್ಷಕ ಎನ್ ಟಿ ಪ್ರಮೋದ ರಾವ್, ನಿವೃತ್ತ ಪ್ರಾಚಾರ್ಯ ರತನ್ ಗಾಂವಕರ ಬಹುಮಾನ ವಿತರಣೆಯಲ್ಲಿ ಪಾಲ್ಗೊಂಡರು.

ಸವಿ ಫೌಂಡೇಶನ್ ಅಧ್ಯಕ್ಷ ಸಂದೀಪ ನಾಯಕ ಸ್ವಾಗತಿಸಿ, ಪ್ರಾಸ್ತಾವಿಸಿದರು. ಶಿಕ್ಷಕ ಎನ್ ರಾಮು ಹಿರೇಗುತ್ತಿ ನಿರೂಪಿಸಿದರು. ಸಾಹಿತ್ಯ ವೇದಿಕೆಯ ಮಾರ್ಗದರ್ಶಕಿ ರಾಧಾ ನಾಯ್ಕ ವಂದಿಸಿದರು.

ಕವನ ರಚನಾ ಸ್ಪರ್ಧೆಯಲ್ಲಿ ವಿಜೇತರಾದ ಶಿಕ್ಷಕ-ವಿದ್ಯಾರ್ಥಿಗಳಲ್ಲಿ ಅಂಬರೀಶ್ ನಾಯಕೋಡಿ ಮತ್ತು ಸಹನಾ ದೇವಳಿ ಮೊದಲ ಬಹುಮಾನ ಗಳಿಸಿದರೆ, ನಿಶ್ಚಿತಾ ನಾಯಕ ದ್ವಿತೀಯ ಬಹುಮಾನ, ಅಂಬರೀಷ್ ತೃತೀಯ ಬಹುಮಾನ ಪಡೆದರು. ಹಿರೇ ಹನುಮಂತಪ್ಪ, ಭಾವನಾ ದೇಶಭಂಡಾರಿ, ಸುಮಿತ್ರಾ ಪೂಜಾರ್, ಸ್ನೇಹಾ, ವಿಜಯಕುಮಾರ, ಚೈತ್ರಾ, ರಮ್ಶಶ್ರೀ ಕೆ ನಾಯ್ಕ ಇವರು ವಾಚಿಸಿದ ಕವನಗಳು ನಿರ್ಣಾಯಕರ ಮೆಚ್ಚುಗೆಗಳಿಸಿ ಪುಸ್ತಕ ಬಹುಮಾನ ಗಳಿಸಿದವು.