UK Express Logo

``ಸಾವಿನಮನೆ''ಯಲ್ಲಿ ಮತ್ತೊಂದು ಆಘಾತ!

By UKExpress on 6/27/2025
image

ಕುಮಟಾ : ಪಟ್ಟಣದಲ್ಲಿ ಹೈಟೆಕ್ ವೈದ್ಯಕೀಯ ಪರೀಕ್ಷಾ ಯಂತ್ರಗಳನ್ನು ಹೊಂದಿದ್ದರೂ ``ಸಾವಿನಮನೆ'' ಎಂದೇ ಕುಖ್ಯಾತಿ ಪಡೆದ ಖಾಸಗಿ ಆಸ್ಪತ್ರೆಯಿಂದ ಹೊರ ಹೋದ ರೋಗಿ ಕೇವಲ ನಾಲ್ಕೇ ಗಂಟೆಯಲ್ಲಿ ಪ್ರಾಣ ಕಳೆದುಕೊಂಡ ಘಟನೆ ಕುಮಟಾದಲ್ಲಿ ಸೋಮವಾರ (ನಿನ್ನೆ) ರಾತ್ರಿ ನಡೆದಿದೆ.

ಕುಮಟಾ ತಾಲೂಕಿನ ಗ್ರಾಮೀಣ ಭಾಗದ ನಿವಾಸಿ ವಕೀಲರೊಬ್ಬರು ಕಾಲು ನೋವು ಎನ್ನುವ ಸಾಮಾನ್ಯ ಕಾರಣಕ್ಕೆ ಕುಮಟಾ ಪಟ್ಟಣದಲ್ಲಿ ಹೈಟೆಕ್ ವೈದ್ಯಕೀಯ ಪರೀಕ್ಷಾ ಯಂತ್ರಗಳನ್ನು ಹೊಂದಿದ್ದ ಕುಖ್ಯಾತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಇವರು ಈ ಖಾಸಗಿ ಆಸ್ಪತ್ರೆಗೆ ಬರುವ ಮೊದಲು ಕಾಲ್ನಡಿಗೆಯಲ್ಲಿ ನಡೆದುಕೊಂಡೇ ಬಂದಿದ್ದರು. ಆಸ್ಪತ್ರೆಗೆ ಬರುವ ಪೂರ್ವದಲ್ಲಿ ಸುಮಾರು 25 ಪ್ರತಿಶತ ಅಶಕ್ತರಾಗಿದ್ದ ರೋಗಿ ಕೇವಲ ಆಸ್ಪತ್ರೆಯಲ್ಲಿದ್ದ ಎರಡೇ ದಿನದಲ್ಲಿ ಸುಮಾರು 75 ಪ್ರತಿಶತ ಅಶಕ್ತರಾಗಿ ನಡೆದಾಡಲಾಗದ ಸ್ಥಿತಿಗೆ ಜಾರಿದ್ದರು. ಇವರು ಕೋವಿಡ್ ಸಂದರ್ಭದಲ್ಲಿ ದಂಪತಿ ಸಹಿತ ಹೈಟೆಕ್ ಯಂತ್ರಗಳನ್ನು ಹೊಂದಿದ್ದ ಇದೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು ಮತ್ತು ಸುಮಾರು 2 ಲಕ್ಷ ರೂಪಾಯಿ (ಎರಡು ಲಕ್ಷ) ವೈದ್ಯಕೀಯ ವೆಚ್ಚ ಭರಿಸಿದ್ದರು.

ನಿನ್ನೆ ಸೋಮವಾರ ಸಂಜೆ ಆರು ಗಂಟೆ ಸುಮಾರಿಗೆ ಹೈಟೆಕ್ ಯಂತ್ರಗಳನ್ನು ಹೊಂದಿದ್ದ ಇದೇ ಖಾಸಗಿ ಆಸ್ಪತ್ರೆಗೆ ವಕೀಲರ ಗೆಳೆಯರೊಬ್ಬರು ರೋಗಿಯ ನೋಡಲು ಬಂದಿದ್ದು, ವಕೀಲರ ಸ್ಥಿತಿ ಕಂಡು ಗಾಬರಿಯಾಗಿದ್ದಾರೆ. ಈ ಆಸ್ಪತ್ರೆಗೆ ಬಂದು ನಾವು ತಪ್ಪು ಮಾಡಿದ್ವಾ ಎಂಬ ಚಿಂತೆ ವಕೀಲರ ಗೆಳೆಯರನ್ನು ಕಾಡಿದೆ. ಹೈಟೆಕ್ ಯಂತ್ರ ಹೊಂದಿರುವ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಾಧ್ಯವೇ ಇಲ್ಲ ಎಂದು ಅರಿತ ಗೆಳೆಯರು ತಕ್ಷಣ ವಕೀಲರನ್ನು ಬೇರೆ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದ್ದಾರೆ.

ಅಷ್ಟರಲ್ಲಾಗಲೇ ಹೈಟೆಕ್ ಯಂತ್ರ ಹೊಂದಿರುವ ಆಸ್ಪತ್ರೆಯ ಬಿಲ್ 60 ಸಾವಿರದ ಗಡಿ ದಾಟಿತ್ತು. 60 ಸಾವಿರ ಬಿಲ್ ಮೊತ್ತ ಪಾವತಿಸಿಯೇ ವಕೀಲರ ಕಡೆಯವರು ಹೊರ ಹೋಗಿದ್ದಾರೆ. ಆದರೆ ರೋಗಿಯಾಗಿದ್ದ ವಕೀಲರು ಬೇರೆ ಆಸ್ಪತ್ರೆಗೆ ಹೋದ ಕೇವಲ ನಾಲ್ಕೇ ಗಂಟೆಯಲ್ಲಿ ಅಂದರೆ ರಾತ್ರಿ ಸುಮಾರು 10 ಗಂಟೆಗೆ ಪ್ರಾಣ ಬಿಟ್ಟಿದ್ದಾರೆ.

ಒಟ್ಟಾರೆ ಹೈಟೆಕ್ ಯಂತ್ರಗಳನ್ನು ಹೊಂದಿರುವ ``ಸಾವಿನಮನೆ'' ಕುಖ್ಯಾತಿಯ ಈ ಆಸ್ಪತ್ರೆಗೆ ಹೋದರೆ ಸಾವೇ ಅಂತಿಮ ಎನ್ನುವುದು ಖಾತ್ರಿಯಾದಂತಾಗಿದೆ.

(ಮತ್ತಷ್ಟು ಮಾಹಿತಿ ನಿರೀಕ್ಷಿಸುತ್ತಿದ್ದೇವೆ.)