ರಾಷ್ಟ್ರೀಯ ನಾಟ್ಯೋತ್ಸವದ 8ನೇ ದಿನ ಕರ್ನಾಟಕ ರಾಜ್ಯದ ಕಲಾಋಣ ಕೆರೆಮನೆ ಮೇಳದ ಮೇಲಿದೆ: ವಿಶ್ವೇಶ್ವರ ಭಟ್ಟ

ಹೊನ್ನಾವರ: ತಾಲೂಕಿನ ಗುಣವಂತೆಯ ಯಕ್ಷಾಂಗಣದಲ್ಲಿ ರಾಷ್ಟ್ರೀಯ ನಾಟ್ಯೋತ್ಸವದ ಎಂಟನೇ ದಿನದ ಸಭಾ ಕಾರ್ಯಕ್ರಮದಲ್ಲಿ ವಿಶ್ವವಾಣಿ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ಟ, ಯಕ್ಷಗಾನ ಭಾಗವತರು ಮತ್ತು ಕಲಾ ಪೋಷಕರಾದ ಪಟ್ಲ ಸತೀಶ ಶೆಟ್ಟಿ, ಮೈಸೂರಿನ ಯಕ್ಷಗಾನ ಸಂಘಟಕರಾದ ಹೇರಂಭ ಭಟ್ಟ ಅಗ್ಗರೆ ಮತ್ತು ಯಕ್ಷಗಾನ ಕಲಾವಿದರಾದ ಕೃಷ್ಣಮೂರ್ತಿ ಗರ್ತಿಕೆರೆ ಇವರಿಗೆ ಕೆರಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಂಮಾನವನ್ನು ಪ್ರದಾನ ಮಾಡಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪತ್ರಕರ್ತ ವಿಶ್ವೇಶ್ವರ ಭಟ್ಟ್, ಯಕ್ಷಗಾನ ಪರಿಪೂರ್ಣ ಕಲೆ ಇದೊಂದು ಕಲಾ ಗಂಗೋತ್ರಿ, ಕಲಾ ಶಿಖರ ಎಂದು ಅಭಿಪ್ರಾಯ ಪಡುತ್ತಾ ಕರ್ನಾಟಕ ರಾಜ್ಯದ ಕಲಾಋಣ ಕೆರೆಮನೆ ಮೇಳದ ಮೇಲಿದೆ ಎಂದರು. ಅನುದಾನದ ಕೊರತೆಯಿಂದ ಯಕ್ಷಗಾನ ಗುರುಕುಲವನ್ನು ಮುಚ್ಚುವ ಸ್ಥಿತಿ ಬರಬಾರದು ಎಂದು ತಿಳಿಸುತ್ತಾ ಕೆರೆಮನೆ ಗುರುಕುಲ ಪುನರ್ ಸ್ಥಾಪಿಸಲು ಎಲ್ಲಾ ರೀತಿಯ ಸಹಕಾರ ವೈಯಕ್ತಿಕವಾಗಿ ಸರ್ಕಾರದ ಮೂಲಕವು ಮಾಡಲು ಸಿದ್ಧ ಎಂದು ತಿಳಿಸಿದರು.
ಪಟ್ಲ ಸತೀಶ ಶೆಟ್ಟಿ ಮಾತನಾಡಿ ಗುರುಕುಲವನ್ನು ಕೆರೆಮನೆ ರಂಗಮಂದಿರದಲ್ಲಿ ಪುನರ್ ಸ್ಥಾಪಿಸಲು ಆರ್ಥಿಕ ಸಹಕಾರವನ್ನು ವ್ಯಕ್ತಪಡಿಸುತ್ತಾ, ಯಕ್ಷಗಾನ ರಂಗ ಶ್ರೀಮಂತವಾಗಿಸಿದ ಕಲಾಚೇತನರ ಕೊಡುಗೆಯಿಂದ ಪಟ್ಲ ಫೌಂಡೇಶನ್ ಕಟ್ಟಲು ಸಾಧ್ಯವಾಯಿತು ಎಂದರು.
ಹೇರಂಭ ಭಟ್ಟ ಮಾತನಾಡಿ ಕಲಾ ಸಂಘಟನೆಯ ಕಷ್ಟ ನಷ್ಟಗಳನ್ನು ವಿವರಿಸುತ್ತಾ ಕೆರೆಮನೆ ಮೇಳಕ್ಕೆ ಶುಭ ಹಾರೈಸಿದರು.
ಕೃಷ್ಣಮೂರ್ತಿ ಗರ್ತಿಕೆರೆ ಮಾತನಾಡಿ ಯಕ್ಷಗಾನದಿಂದ ಪ್ರೇರಣೆ ಪಡೆದ ನಾನು ಸಂಮಾನ ಸ್ವೀಕರಿಸಲು ಸಾಧ್ಯವಾಯಿತು ಎಂದು ಅಭಿಪ್ರಾಯ ಪಟ್ಟರು.
ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿದ್ದ ಪ್ರಜಾವಾಣಿ ಪ್ರಧಾನ ಸಂಪಾದಕರಾದ ರವೀಂದ್ರ ಭಟ್ ಮಾತನಾಡಿ ಯುನೆಸ್ಕೋ ಮಾನ್ಯತೆಯನ್ನು ಪ್ರಸ್ತಾಪಿಸುತ್ತಾ ಪರಂಪರೆಯನ್ನು ಬಿಡದೇ ಕೆರೆಮನೆ ಮೇಳ ಮುಂದುವರಿದಿರುವುದೇ ಮತ್ತು ಅಪಸವ್ಯಗಳಿಂದ ದೂರ ಇದ್ದುದೇ ಇದಕ್ಕೆ ಕಾರಣ ಎಂದರು.
ಅಶೋಕ ಹಾಸ್ಯಗಾರ ಮಾತನಾಡಿ ಕೆರೆಮನೆ ಮೇಳದ ಕಷ್ಟ ನಷ್ಟಗಳನ್ನು ವಿವರಿಸುತ್ತಾ ಈ ಮೇಳದೊಂದಿಗೆ ತನಗಿರುವ ಸಂಬಂಧವನ್ನು ವಿವರಿಸಿದರು. ಯಕ್ಷಗಾನವು ನಾಟ್ಯ ಶಾಸ್ತ್ರದ ಪ್ರಾಯೋಗಿಕ ಸ್ವರೂಪ ಎಂದು ಹೇಳುತ್ತಾ, ಇದು ಪ್ರಾತಿನಿಧಿಕ ಮತ್ತು ಶಾಸ್ತ್ರೀಯ ಕಲೆ ಎಂದು ಸರ್ಕಾರ ಪರಿಗಣಿಸುವಂತಾದರೆ ಮಾತ್ರ ಯಕ್ಷಗಾನಕ್ಕೆ ಸಹಾಯಧನ ತರಲು ಸಾಧ್ಯವಂತಾಗಿ ಈ ಕಲೆ ಉಳಿಸಲು ಸಾಧ್ಯ ಎಂದರು.
ಡಾ.ಪುಷ್ಫಲತಾ ವೈದ್ಯರವರು ಮಾತನಾಡಿ ಯಕ್ಷಗಾನ ಕಲೆ ಉಳಿಸುವ ಕಾರ್ಯದಲ್ಲಿ ನಮ್ಮೆಲ್ಲರ ಪ್ರಯತ್ನ ಬೇಕಾಗಿದೆ ಎಂದರು.
ಸಭಾಧ್ಯಕ್ಷರಾಗಿ ಉಪಸ್ಥಿತರಿದ್ದ ಜಿ.ಎಸ್.ಭಟ್ಟ ಮಾತನಾಡಿ ಕೆರೆಮನೆ ಯಕ್ಷಗಾನದ ವಿಶ್ವವಿದ್ಯಾಲಯ ಆಗಬೇಕು, ಅಂಚೆಚೀಟಿ ಬಿಡುಗಡೆ ಮಾಡುವುದರ ಮೂಲಕ ಗೌರವಿಸಬೇಕು ಮತ್ತು ಕನ್ನಡ ಉಳಿಯಬೇಕಾದರೆ ಯಕ್ಷಗಾನ ಉಳಿಯಬೇಕು ಎಂದರು.
ಸಂಘಟನೆಯ ಲಕ್ಷ್ಮೀನಾರಾಯಣ ಕಾಶಿ ಸ್ವಾಗತಿಸಿ, ಶಿವಾನಂದ ಹೆಗಡೆ ಕೆರೆಮನೆ ವಂದಿಸಿದರು. ಮಹೇಶ ಹೆಗಡೆ, ಮಾಳ್ಕೋಡ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಡಾ.ದತ್ತಾತ್ರೇಯ ವೇಲಂಕರರಿಂದ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ ನಡೆಯಿತು. ಇವರಿಗೆ ತಬಲಾದಲ್ಲಿ ಗುರುರಾಜ ಹೆಗಡೆ ಆಡುಕಳ ಮತ್ತು ಹಾರ್ಮೋನಿಯಂದಲ್ಲಿ ಸತೀಶ ಭಟ್ಟ ಹೆಗ್ಗಾರ ಸಾಥ್ ನೀಡಿದರು. ತದನಂತರದಲ್ಲಿ ವಾಲಿ ಮೋಕ್ಷ ತಾಳಮದ್ದಳೆ ನಡೆಯಿತು.