ಮಿರ್ಜಾನ್ ಕೋಟೆ, ಕುಮಟಾ, ಉತ್ತರ ಕನ್ನಡ ಜಿಲ್ಲೆ

ಮಿರ್ಜಾನ್ ಕೋಟೆಯು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ್ ಗ್ರಾಮದಲ್ಲಿದೆ.. ಕುಮಟಾ ಪಟ್ಟಣದಿಂದ 10.5 ಕಿಮಿ ದೂರದಲ್ಲಿರುವ ಈ ಐತಿಹಾಸಿಕ ಕೋಟೆಯು ನಾವು ಪ್ರಸ್ತುತ ಕಾಣಬಹುದಾದ ಉತ್ತಮ ಸ್ಥಿತಿಯಲ್ಲಿರುವ ಕೋಟೆಗಳಲ್ಲಿ ಇದು ಕೂಡಾ ಒಂದಾಗಿದೆ. ಈ ಕೋಟೆಯು ಅಘನಾಶಿನಿ ನದಿಯ ತಟದಲ್ಲಿದ್ದು ಅದರಾಚೆಗೆ ಅರಬೀ ಸಮುದ್ರವನ್ನು ಹೊಂದಿದೆ..
ಸುಮಾರು 11.5 ಎಕರೆ ವಿಸ್ತಾರ ಹೊಂದಿರುವ ಈ ಕೋಟೆಯು ಕರಾವಳಿ ಭಾಗದಲ್ಲಿ ಕಾಣಸಿಗುವ ಜಂಬಿಟ್ಟಿಗೆ ಕಲ್ಲಿನಿಂದ ಗೋಡೆಗಳನ್ನ ಕಟ್ಟಲಾಗಿದೆ ಹಾಗೂ ಇಂದಿಗೂ ಸಹ ಗಟ್ಟಿಮುಟ್ಟಾಗಿದೆ.. ಇದರಲ್ಲಿ ಒಂದು ಮುಖ್ಯ ದ್ವಾರವಿದ್ದು ಮೂರು ಉಪ ದ್ವಾರಗಳು ಕಂಡುಬರುತ್ತವೆ.. ಕೋಟೆಯ ಸುತ್ತ ತಗ್ಗು ಪ್ರದೇಶವಿದ್ದು ಹಲವಾರು ಗುಪ್ತದ್ವಾರಗಳನ್ನು ಹೊಂದಿದೆ. ಅದಲ್ಲದೇ ಇಲ್ಲಿ ಹಲವಾರು ಕಂದಕಗಳು, ದರ್ಬಾರ್ ಹಾಲ್, ರಾಣಿಯ ಸಿಂಹಾಸನ, ಪಾಕಶಾಲೆ, ಮಾರುಕಟ್ಟೆ, ದೇವಸ್ಥಾನ, ಐತಿಹಾಸಿಕ ಅವಶೇಷಗಳು ಮತ್ತು ಈ ಕೋಟೆಯಲ್ಲಿ ಮೂರು (3) ಭಾವಿಗಳನ್ನು ಪ್ರಸ್ತುತ ನಾವು ಕಾಣಬಹುದಾಗಿದೆ. ಅದಲ್ಲದೇ ಈ ಕೋಟೆಯು ಧ್ವಜ ಸ್ತಂಭ, ಕಾವಲು ಗೋಪುರ ಹೊಂದಿದ್ದು ಅಲ್ಲಿಂದ ಕಾಣುವ ಅಘನಾಶಿನಿ ನದಿ ನೋಡುಗರನ್ನು ಕೈ ಬೀಸಿ ಆಕರ್ಷಿಸುವುದಂತು ಸುಳ್ಳಲ್ಲ..
ಕರ್ನಾಟಕದ ಇತಿಹಾಸದಲ್ಲಿ ‘ಕಾಳುಮೆಣಸಿನ ರಾಣಿ’ ಎಂದೇ ಪ್ರಖ್ಯಾತಿಗೊಂಡಿದ್ದ ಸಾಳುವ ವಂಶದ ಗೇರುಸೊಪ್ಪೆಯ ರಾಣಿ ಚೆನ್ನಭೈರಾದೇವಿ ಈ ಕೋಟೆಯನ್ನು 16 ನೇ ಶತಮಾನದಲ್ಲಿ ನಿರ್ಮಿಸಿದ್ದಾಳೆ ಎಂದು ಇತಿಹಾಸದ ಪುಟಗಳಲ್ಲಿ ಉಲ್ಲೇಖಿಸಲಾಗಿದೆ. ರಾಣಿ ಚೆನ್ನಭೈರಾದೇವಿಯು ವಿಜಯನಗರ ಅರಸರ ಸಾಮಂತ ರಾಣಿಯಾಗಿದ್ದು ಸುಮಾರು 54 ವರ್ಷಗಳ ಕಾಲ ಈ ಪ್ರಾಂತ್ಯವನ್ನ ರಾಜ್ಯಭಾರ ಮಾಡಿರುವುದು ವಿಶೇಷವಾಗಿದೆ..
ಮಧುಕರ ನಾಯ್ಕ