ಬೇಸಿಗೆಯಲ್ಲಿಯೂ ಧುಮ್ಮಿಕ್ಕುವ ವಿಭೂತಿ ಫಾಲ್ಸ್: ಹೆಚ್ಚುತ್ತಿರುವ ಪ್ರವಾಸಿಗರು

ಗೋಕರ್ಣ: ಜಿಲ್ಲೆಯಲ್ಲಿ ಬೇಸಿಗೆಯಲ್ಲಿಯೂ ಕೂಡ ಹರಿಯುವ ಜಲಪಾತಗಳು ಬೆರಳೆಣಿಕೆಯಷ್ಟಿವೆ. ಅದರಲ್ಲಿ ಗೋಕರ್ಣದಿಂದ ಶಿರಸಿಗೆ ತೆರಳುವ ಮಾರ್ಗಮಧ್ಯದ ಅಚವೆ ಗ್ರಾ.ಪಂ. ವ್ಯಾಪ್ತಿಯ ಮಾಬಗಿಯ ವಿಭೂತಿ ಫಾಲ್ಸ್ ಕೂಡ ಒಂದು. ಇಲ್ಲಿ ಪ್ರತಿದಿನ ನೂರಾರು ಪ್ರವಾಸಿಗರು ಆಗಮಿಸಿ ಇಲ್ಲಿಯ ಸವಿಯನ್ನು ಅನುಭವಿಸುತ್ತಿದ್ದಾರೆ.
ಶಿರಸಿ ಮಾರ್ಗವಾಗಿ ಯಾಣ, ಗೋಕರ್ಣಕ್ಕೆ ಬರುವ ಮಾಬಗಿಯಲ್ಲಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡು ಅನತಿ ದೂರದಲ್ಲಿ ಈ ಫಾಲ್ಸ್ ಕಂಡುಬರುತ್ತದೆ. ಕಳೆದ ಎರಡು ದಶಕಗಳ ಹಿಂದೆ ಇಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲದೆ ಕೇವಲ ಕಾಲುದಾರಿ ಮಾತ್ರ ಹೊಂದಿತ್ತು. ರಾಜ್ಯ ಹೆದ್ದಾರಿಯಿಂದ 2 ಕಿ.ಮೀ. ಇದ್ದು, ಈಗ ಪ್ರವಾಸೋದ್ಯಮ ಇಲಾಖೆ ಹಾಗೂ ಅರಣ್ಯ ಇಲಾಖೆಯವರು ರಸ್ತೆ ಹಾಗೂ ಮೂಲಭೂತ ಸೌಲಭ್ಯವನ್ನು ಒದಗಿಸಿದ್ದಾರೆ. ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದರಿಂದಾಗಿ ಇನ್ನೂ ಮೂಲಭೂತ ಸೌಕರ್ಯ ಹೆಚ್ಚಿಸುವ ಅಗತ್ಯವಿದೆ.
ಈ ಜಲಪಾತವು ಯಾಣಕ್ಷೇತ್ರದ ಮೇಲ್ಭಾಗದ ಗುಂಬ್ಲೆಗದ್ದೆಯಿಂದ ಹರಿದು ಅಲ್ಲಿಂದ ಯಾಣ ಶಿಖರದ ಅಂಚಿನಲ್ಲಿರುವ ಚಂಡಿಕಾ ಹೊಳೆಯ ಮೂಲಕ ತೊರೆ ಬಂದು 200 ಮೀಟರ್ ಎತ್ತರದಿಂದ ಬಂಡೆಗಳ ಮೇಲೆ ಸೋಪಾನವಾಗಿ ಧುಮುಕುತ್ತದೆ. ನೀರು ಧುಮ್ಮಿಕ್ಕುವಾಗ ಅದರ ಹನಿಗಳು ಸಿಡಿಯುವುದರಿಂದ ಸ್ಥಳೀಯರು ಇದನ್ನು ‘ಶಿರ್ಲೆ’ ಎಂದು ಕರೆಯುತ್ತಿದ್ದರು. ನಂತರ ವಿಭೂತಿ ಫಾಲ್ಸ್ ಎಂದು ಪ್ರಸಿದ್ಧಿಯಾಯಿತು.
ಮುಖ್ಯ ರಸ್ತೆಯಿಂದ 2 ಕಿ.ಮೀ. ದೂರದಲ್ಲಿರುವ ಈ ಫಾಲ್ಸ್‍ಗೆ ಈಗಾಗಲೇ ಸುಮಾರು ಒಂದೂವರೆ ಕಿ.ಮೀ. ಉತ್ತಮ ರಸ್ತೆ ನಿರ್ಮಾಣಗೊಂಡಿದ್ದು, ಅಲ್ಲಲ್ಲಿ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆಯಿದೆ. ಕುಡಿಯುವ ನೀರು, ಶೌಚಾಲಯ, ಫಾರ್ಕಿಂಗ್ ವ್ಯವಸ್ಥೆ ಇನ್ನಿತರ ಸೌಲಭ್ಯವಿದೆ. ಬೇಸಿಗೆಯಲ್ಲಿಯೂ ಕೂಡ ಇಲ್ಲಿ ನೀರು ಹರಿಯುವುದರಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸಿ ನೀರಿನೊಂದಿಗೆ ಚೆಲ್ಲಾಟವಾಡು ತೆರಳುತ್ತಾರೆ.
ಶಿರಸಿ ಮೂಲಕವಾಗಿ ನಾವು ಗೋಕರ್ಣಕ್ಕೆ ಪ್ರವಾಸಕ್ಕೆ ಬರುತ್ತೇವೆ. ಇದೇ ರಸ್ತೆಯಲ್ಲಿ ಯಾಣ ಕೂಡ ಸಿಗುವುದರೊಂದಿಗೆ ಇನ್ನಷ್ಟು ಅನುಕೂಲವಾಗುತ್ತದೆ. ಹಾಗೇ ವಿಭೂತಿ ಫಾಲ್ಸ್‍ಗೆ ಕೂಡ ಭೇಟಿ ನೀಡಲು ಸಾಧ್ಯವಾಗುತ್ತದೆ. ಪ್ರವಾಸಿಗರಿಗೆ ಇದೊಂದು ಅದ್ಭುತವೆನಿಸಿದ್ದು, ವರ್ಷದಲ್ಲಿ ಇಲ್ಲಿಗೆ ನಾಲ್ಕಾರು ಬಾರಿ ಆಗಮಿಸುತ್ತೇವೆ.
ಪ್ರಶಾಂತ ಭಟ್, ಪ್ರವಾಸಿಗಜನಪ್ರತಿನಿಧಿಗಳು ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದರೆ ಪ್ರವಾಸಿಗರು ಇನ್ನಷ್ಟು ಸಂಖ್ಯೆಯಲ್ಲಿ ಬರುತ್ತಾರೆ. ಈ ಹಿಂದೆ ಹೋಲಿಸಿದರೆ ಈಗ ಪರವಾಗಿಲ್ಲ. ಬೇಸಿಗೆ ರಜೆ ಇರುವುದರಿಂದ ಪ್ರವಾಸಿಗರ ಸಂಖ್ಯೆಯೂ ಅಧಿಕವಾಗುತ್ತದೆ. ಹೀಗಾಗಿ ಇಲ್ಲಿ ಅಗತ್ಯವಿಸುವ ಕೆಲವು ಸೌಲಭ್ಯಗಳನ್ನು ಒದಗಿಸಬೇಕು.
ಜಿ.ಎಂ.ಶೆಟ್ಟಿ, ಜಿ.ಪಂ. ಮಾಜಿ ಸದಸ್ಯ