ಬಿ.ಪಿ.ಎಲ್ ಕಾರ್ಡ್ ನೋಂದಣಿಗೆ ತೆರಳಿದವರು ಬರಿ ಗೈಲಿ ವಾಪಾಸ್

ಅಂಕೋಲಾ: ಚುನಾವಣೆ ಮುಗಿದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಏರಿದೆ. ಚುನಾವಣೆ ಪೂರ್ವ ಅನ್ನಭಾಗ್ಯ ಯೋಜನೆ, ಗೃಹಲಕ್ಷ್ಮಿ ಯೋಜನೆ, 200 ಯೂನಿಟ್ ಉಚಿತ ವಿದ್ಯುತ್, ಯುವನಿಧಿ ಯೋಜನೆ, ಮಹಿಳೆಯರಿಗೆ ಉಚಿತ ಬಸ್ ಪಾಸ್ ಐದು ಗ್ಯಾರಂಟಿ ಯೋಜನೆ ಘೋಷಣೆ ಮಾಡಿತ್ತು. ಅಲ್ಲದೇ ಈ ಕುರಿತು ಮಾಧ್ಯಮಗಳಲ್ಲಿ ವ್ಯಾಪಕ À್ರಚಾರ ನಡೆಸಿ ಭರ್ಜರಿ ಗೆಲುವಿನೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರಿದೆ. ಐದು ಗ್ಯಾರಂಟಿ ಯೋಜನೆಗೆ ಬಿಪಿಎಲ್ ಕಾರ್ಡ್ ಪ್ರಮುಖ ಮಾನದಂಡವಾಗಿರುವುದರಿಂದ ಫಲಾನುಭವಿಗಳು ಸೈಬರ್ ಸೆಂಟರ್‍ಗಳಿಗೆ ಅರ್ಜಿ ಸಲ್ಲಿಸಲು ಮುಗಿಬೀಳುವ ದೃಶ್ಯ ಕಂಡು ಬರುತ್ತಿದ್ದು, ಹೊಸ ಪಡಿತರ ಕಾರ್ಡ್ ನೊಂದಣಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಕಾರಣ ಜನರು ನಿರಾಸೆಗೊಂಡು, ಹಿಡಿಶಾಪ ಹಾಕುತ್ತ ಮನೆಗೆ ವಾಪಸಾಗುತ್ತಿದ್ದಾರೆ.
ಈ ಮೊದಲು ಅರ್ಜಿ ಸಲ್ಲಿಸಿದವರು ತಾಲೂಕು ಕಛೇರಿಗೆ ಅಲೆದಾಟ ಆರಂಭಿಸಿದ್ದಾರೆ. ಈ ಕುರಿತು ಸೈಬರ್ ಸೆಂಟರ್ ಮಾಲೀಕರನ್ನು ವಿಚಾರಿಸಿದಾಗ ನೀತಿಸಂಹಿತೆ ಜಾರಿಯಾದಾಗ ನೂತನ ಕಾರ್ಡ್‍ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು. ಹೊಸ ಸರಕಾರ ಬಂದ ನಂತರ ಮೂರ್ನಾಲ್ಕು ದಿನ ಮಾತ್ರ ಸೈಟ್ ಓಪನ್ ಆಗಿತ್ತು. ಮೇ 23 ರಿಂದ ಸರಕಾರದ ವೆಬ್ ಸೈಟ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಕಾರಣ ಜನರು ವಾಪಾಸ್ ತೆರಳುವಂತಾಗಿದೆ. ಹೆಸರು ಸೇರ್ಪಡೆ, ತಿದ್ದುಪಡಿ, ಹೆಸರು ತೆಗೆಯುವದು ಅದನ್ನು ಕೂಡ ತಡೆ ಹಿಡಿಯಲಾಗಿದೆ ಎನ್ನುತ್ತಾರೆ. ಪ್ರತಿದಿನ ನೂರಾರು ಜನರು ಹಳ್ಳಿ ಹಳ್ಳಿಗಳಿಂದ ಸಾರಿಗೆ ವೆಚ್ಚವನ್ನು ಬರಿಸಿ ಹೊಸ ಕಾರ್ಡ್‍ಗೆ ಅರ್ಜಿ ಸಲ್ಲಿಸಲು ಬರುತ್ತಿದ್ದು, ಸರಕಾರ ಮೂಗಿಗೆ ತುಪ್ಪ ಸವರುತ್ತಿವೆ ಎಂದು ಆಕ್ರೋಶದಿಂದಲೇ ಹೊರನಡೆಯುತ್ತಿದ್ದಾರೆ.
ಅರ್ಜಿ ಸಲ್ಲಿಸಿದ ತಕ್ಷಣ ಬಿಪಿಎಲ್ ಕಾರ್ಡ್ ಲಭಿಸುವುದಿಲ್ಲ. ಕನಿಷ್ಠ ಮೂರು ತಿಂಗಳಾದರೂ ಕಾಯಬೇಕಾಗಿದೆ. ಈಗಾಗಲೇ ಬಿ.ಪಿ.ಎಲ್ ಕಾರ್ಡ್ ಹೊಂದಿದವರ ಚಿತ್ತ ಗ್ಯಾರಂಟಿ ಯೋಜನೆಗಳತ್ತ ಹೊರಳಿದೆ. ಸರ್ಕಾರ ಕೂಡ ತನ್ನ ಮೊದಲ ಸಚಿವ ಸಂಪುಟ ಸಭೆಯಲ್ಲಿ ಯೋಜನೆಗಳ ಅನುಷ್ಠಾನಕ್ಕೆ ತಾತ್ವಿಕ ಒಪ್ಪಿಗೆ ನೀಡಿದೆಯಾದರೂ ಜನರ ಕುತೂಹಲ ಗ್ಯಾರಂಟಿ ಯೋಜನೆಯತ್ತ ನೆಟ್ಟಿದೆ.
ಪ್ರವೀಣ ಶೆಟ್ಟಿ