ನೀಲಿಕಲ್ಲು ಕೊಯ್ಲು ಉತ್ಸವ ಯಶಸ್ವಿ

ಅಂಕೋಲಾ: ಅರಣ್ಯ ಇಲಾಖೆ ಕಾರವಾರ ವಿಭಾಗ, ಅಂಕೋಲಾ ವಲಯ ಹಾಗೂ ಕೋಸ್ಟಲ್ ಎಂಡ್ ಮರೈನ್ ಇಕೋಸಿಸ್ಟಮ್ ಸೆಲ್ ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ಬೇಳಾ ಬಂದರದಲ್ಲಿ ನೀಲಿಕಲ್ಲು ಕೊಯ್ಲು ಉತ್ಸವ 2023ನ್ನು ಹಮ್ಮಿಕೊಳ್ಳಲಾಯಿತು.
4 ತಿಂಗಳ ಹಿಂದೆ ರಾಫ್ಟ್‍ಗಳ ಮೂಲಕ 60ರಿಂದ 80 ಕೆಜಿಯಷ್ಟು ಮರಿಗಳನ್ನು ಬಿಟ್ಟು 300 ಕೆಜಿ ಗಿಂತ ಅಧಿಕ ಇಳುವರಿಯನ್ನು ಪಡೆಯಲಾಯಿತು. ಈ ವೇಳೆ ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕಾರವಾರದ ಮರೈನ್ ಬಯಾಲಜಿ ಕಾಲೇಜಿನ ನಿವೃತ್ತ ಪ್ರಚಾರ್ಯ ವಿ.ಎನ್.ನಾಯ್ಕ ಮಾತನಾಡಿ, ನೀಲಿಕಲ್ಲು ಕರಾವಳಿ ಭಾಗದ ನೆಚ್ಚಿನ ಆಹಾರವಾಗಿದೆ. ಇದು ನಾಲ್ಕು ತಿಂಗಳ ಬೆಳೆಯಾಗಿದ್ದು ಇದನ್ನು ಉಪ್ಪು ನೀರಿನಲ್ಲಿ ರಾಫ್ಟ್ ಕಲ್ಚರ್, ರೋಪ್ ಕಲ್ಚರ್ ಮತ್ತು ಬಾಟಮ್ ಕಲ್ಚರ್ ಈ ಮೂರು ವಿಧಾನಗಳ ಮೂಲಕ ಕೃಷಿ ಮಾಡಲಾಗುತ್ತದೆ. ಇದರಿಂದ ನೀಲಿಕಲ್ಲು ಸಂತತಿಯನ್ನು ಉಳಿಸಲು ಸಹಾಯಕವಾಗುತ್ತದೆ. ಸಮುದ್ರ ಜೀವಿಗಳು ಅತಿ ಹೆಚ್ಚು ಪೌಷ್ಟಿಕಾಂಶಗಳನ್ನು ಹೊಂದಿದ್ದು, ಇವುಗಳನ್ನು ಲಾಭದಾಯಕವಾಗಿ ಬೆಳೆಯಲು ಹೆಚ್ಚು ಜನರು ಆಸಕ್ತಿ ವಹಿಸಬೇಕು ಎಂದರು.
ಅಂಕೋಲಾ ವಲಯ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣ ಗೌಡ ಅಧ್ಯಕ್ಷತೆ ವಹಿಸಿದ್ದರು. ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ರೆನಿಟಾ ಡಿಸೋಜಾ, ಮೀನುಗಾರಿಕಾ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಚಂದ್ರಕಾಂತ ಲಿಂಗದಾಳ, ಕೋಸ್ಟಲ್ ಮತ್ತು ಮರೈನ್ ಇಕೋ ಸಿಸ್ಟಮ್‍ನ ಪ್ರಮೋದ್ ಬಿ., ಕಾರವಾರ ಅರಣ್ಯ ಉಪವಿಭಾಗದ ಎಸಿಎಫ್ ಜಯೇಶ, ಮಂಗಲಾ ವೆಂಕಟೇಶ ಉಪಸ್ಥಿತರಿದ್ದರು.