ನಾಮಧಾರಿ ಕೋಟಾದಡಿ ಮಂಜುನಾಥ ನಾಯ್ಕಗೆ ನಿಗಮ ಮಂಡಳಿ ಸ್ಥಾನ ಸಾಧ್ಯತೆ

ಗೋಕರ್ಣ: ರಾಜ್ಯ ಸರಕಾರ ಸಂಪುಟ ವಿಸ್ತರಣೆ, ಖಾತೆ ಹಂಚಿಕೆಯಲ್ಲಿ ತಲ್ಲೀನಗೊಂಡರೆ ಇನ್ನೊಂದೆಡೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಬಾರಿ ಪೈಪೋಟಿ ಆರಂಭಗೊಂಡಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಈ ಹಿಂದೆ ಬಿಜೆಪಿಯವರು ನೇಮಕ ಮಾಡಿದ್ದ ಎಲ್ಲ ನಿಗಮ ಮಂಡಳಿಯ ಹುದ್ದೆಗಳನ್ನು ರದ್ದು ಮಾಡಿತ್ತು. ಹೀಗಾಗಿ ಕಾಂಗ್ರೆಸ್‍ನಲ್ಲಿ ನಿಗಮ ಮಂಡಳಿಯಲ್ಲಿ ಹೆಚ್ಚಿನ ಬೇಡಿಕೆ ಬಂದಂತಾಗಿದೆ.
ಜಿಲ್ಲೆಯಲ್ಲಿ ಬಹುಸಂಖ್ಯಾತರಾಗಿರುವ ನಾಮಧಾರಿಗಳಿಗೆ ಕಾಂಗ್ರೆಸ್ ಶಿರಸಿ-ಸಿದ್ದಾಪುರ ಕ್ಷೇತ್ರಕ್ಕೆ ಮಾತ್ರ ಒಂದು ಸ್ಥಾನ ನೀಡಿತ್ತು. ಹೀಗಾಗಿ ಭೀಮಣ್ಣ ನಾಯ್ಕ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಗೆಲುವನ್ನು ಸಾಧಿಸಿದ್ದರು. ರಾಷ್ಟ್ರೀಯ ಪಕ್ಷದಿಂದ ನಾಮಧಾರಿಗಳಿಗೆ ಹೆಚ್ಚಿನ ಸ್ಥಾನಮಾನ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಲೇ ಇದೆ. ಹೀಗಾಗಿ ಬಿಜೆಪಿಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾಗಿದ್ದ ಗೋವಿಂದ ನಾಯ್ಕ ಅವರ ಹುದ್ದೆಯನ್ನು ರದ್ದು ಮಾಡಿದ್ದರಿಂದಾಗಿ ನಾಮಧಾರಿಗಳಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕು ಎಂಬ ಕೂಗು ಸಹಜವಾಗಿಯೇ ಕೇಳಿಬರುತ್ತಲಿದೆ.
ಕುಮಟಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿಯಾಗಿದ್ದ ಮಂಜುನಾಥ ಎಲ್. ನಾಯ್ಕ ಸಾಕಷ್ಟು ಶ್ರಮ ವಹಿಸಿ ಚುನಾವಣೆಗೆ ಒಂದು ವರ್ಷ ಇರುವಾಗಲೇ ಕ್ಷೇತ್ರಾದ್ಯಂತ ಸಂಚರಿಸಿ ಪಕ್ಷ ಬಲಪಡಿಸುವಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಕೊನೆ ಹಂತದಲ್ಲಿ ಟಿಕೇಟ್ ಕೈ ತಪ್ಪಿದರೂ ಮುನಿಸಿಕೊಳ್ಳದೇ ಅಭ್ಯರ್ಥಿ ನಿವೇದಿತ್ ಆಳ್ವಾ ಪರವಾಗಿ ಕೆಲಸ ಮಾಡಿದ್ದರು. ಹೀಗಾಗಿ ಇವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲು ಹಲವರು ಶಿಫಾರಸ್ಸು ಮಾಡಿರುವುದಾಗಿ ತಿಳಿದುಬಂದಿದೆ.
ಬಿ.ಇ. ವಿದ್ಯಾರ್ಹತೆ ಹೊಂದಿರುವ ಮಂಜುನಾಥ ಎಲ್. ನಾಯ್ಕ ಅವರು ಕೆಪಿಸಿಸಿಯ ಪ್ರಚಾರ ಸಮಿತಿಯ ರಾಜ್ಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುವುದರ ಜತೆಗೆ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರು. ಹೀಗಾಗಿ ಮಂಜುನಾಥ ನಾಯ್ಕ ಅವರಿಗೆ ನಾಮಧಾರಿ ಕೋಟ ಅಡಿಯಲ್ಲಿ ನಿಮಗ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಸಿದ್ಧತೆಗಳು ನಡೆಯುತ್ತಲಿದೆ ಎನ್ನಲಾಗಿದೆ.
ಮಂಜುನಾಥ ನಾಯ್ಕ ಇವರು ಮೂಲತಃ ಅಂಕೋಲಾದವರಾದರೂ ಈಗ ಕುಮಟಾದಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ. ಕುಮಟಾದಲ್ಲಿ ಕಾಂಗ್ರೆಸ್ ಛಿದ್ರಗೊಂಡಿದ್ದು, ನಿಗಮ ಮಂಡಳಿ ಮೂಲಕವಾದರೂ ಮತ್ತೆ ಸಂಘಟನೆ ಮಾಡಬೇಕು. ಕಾಂಗ್ರೆಸ್‍ನಿಂದ ಪಕ್ಷಾಂತರ ಮಾಡಿದವರನ್ನು ಮತ್ತೆ ಮರಳಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮುಂಬರುವ ಲೋಕಸಭಾ ಚುನಾವಣೆ ಎದುರಿಸಲು ಸಜ್ಜಾಗಬೇಕು ಎಂಬ ಲೆಕ್ಕಾಚಾರ ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಲಿದೆ. ಒಟ್ಟಿನಲ್ಲಿ ಮಂಜುನಾಥ ಎಲ್. ನಾಯ್ಕ ಇವರು ಈಗ ನಿಗಮ ಮಂಡಳಿಯತ್ತ ಚಿತ್ತ ಹರಿಸಿದ್ದಾರೆ.