ಜಿಲ್ಲೆಯ ಕೈ ನಾಯಕರಿಂದ ನಿಗಮಕ್ಕಾಗಿ ಕಸರತ್ತು: ಸಚಿವ ಸಂಪುಟ ವಿಸ್ತರಣೆ ಮುನ್ನವೇ ನಿಗಮದ ಮೇಲೆ ಕಣ್ಣಿಟ್ಟ ನಾಯಕರು

ಕಾರವಾರ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹೋಗಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಿದೆ. ಸಿಎಂ, ಡಿಸಿಎಂ ಸೇರಿ ಎಂಟು ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದು ಉಳಿದ ಸಚಿವ ಸ್ಥಾನ ತುಂಬಲು ಕಸರತ್ತು ಪ್ರಾರಂಭವಾಗಿದೆ. ಸಂಪುಟ ವಿಸ್ತರಣೆ ಮುನ್ನವೇ ಜಿಲ್ಲೆಯಲ್ಲಿ ನಿಗಮಗಳ ಮೇಲೆ ಹಲವರು ಕಣ್ಣಿಟ್ಟು ನಾಯಕರ ಬಳಿ ಒಲೈಸುವ ಕಾರ್ಯಕ್ಕೆ ಇಳಿದಿದ್ದಾರೆ.
ಯಾವುದೇ ಸರ್ಕಾರಗಳು ಆಡಳಿತಕ್ಕೆ ಬಂದಾಗ ನಿಗಮ ಮಂಡಳಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮಾಡುವದು ಸಾಮಾನ್ಯ. ಕೆಲ ನಿಗಮಗಳಿಗೆ ಶಾಸಕರಿಗೆ ಅವಕಾಶ ಕೊಟ್ಟರೇ ಇನ್ನು ಪಕ್ಷಕ್ಕಾಗಿ ದುಡಿದ ನಾಯಕರುಗಳಿಗೆ ಕಾರ್ಯಕರ್ತರುಗಳಿಗೆ ನೇಮಕ ಮಾಡುವ ಮೂಲಕ ಅವಕಾಶವನ್ನ ಮಾಡಿಕೊಡಲಾಗುತ್ತದೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಭಟ್ಕಳದ ಗೋವಿಂದ ನಾಯ್ಕ, ಯಲ್ಲಾಪುರದ ಪ್ರಮೋದ್ ಹೆಗಡೆ, ವಿ.ಎಸ್ ಪಾಟೀಲ್, ಅನಂತ್ ಹೆಗಡೆ ಆಶೀಸರ ನಿಗಮಗಳಲ್ಲಿ ಅವಕಾಶವನ್ನ ಪಡೆದಿದ್ದರು. ಸದ್ಯ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಿದ್ದು ಜಿಲ್ಲೆಯಲ್ಲಿ ಸುಮಾರು ಹತ್ತಕ್ಕೂ ಅಧಿಕ ನಾಯಕರುಗಳು ನಿಗಮದಲ್ಲಿ ಅವಕಾಶಕ್ಕಾಗಿ ಈಗಲೇ ಕಸರತ್ತನ್ನ ಪ್ರಾರಂಭಿಸಿದ್ದಾರೆ.
ಈ ಹಿಂದೆ ಸಿದ್ದರಾಮಯ್ಯ ಸಿಎಂ ಇದ್ದ ವೇಳೆಯಲ್ಲಿ ಜಿಲ್ಲೆಯಲ್ಲಿ ನಿವೇದಿತ್ ಆಳ್ವಾ ಮೊದಲ ಅವಧಿಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದರೆ ಎರಡನೇ ಅವಧಿಯಲ್ಲಿ ಶಾರದಾ ಶೆಟ್ಟಿ ಆಗಿದ್ದರು. ಇನ್ನು ಭಟ್ಕಳದ ಮುಜಾಮಿಲ್ ಹಾಗೂ ಹೊನ್ನಾವರದ ಶಂಭು ಗೌಡ ನಿಗಮದ ಅಧ್ಯಕ್ಷರಾಗಿದ್ದರು. ಸರ್ಕಾರದ ಕೊನೆಯ ಅವಧಿಯಲ್ಲಿ ಅಂಕೋಲಾದ ರಾಜೇಂದ್ರ ನಾಯ್ಕರಿಗೆ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅವಕಾಶ ಮಾಡಿಕೊಡಲಾಗಿತ್ತು. ಬಿಜೆಪಿ ಸರ್ಕಾರಕ್ಕೆ ಹೋಲಿಸಿದರೆ ಕಾಂಗ್ರೆಸ್ ಸರ್ಕಾರ ಇರುವ ವೇಳೆಯಲ್ಲಿ ಜಿಲ್ಲೆಯಲ್ಲಿ ನಿಗಮ ಮಂಡಳಿಗಳಿಗೆ ಅವಕಾಶ ಹೆಚ್ಚಾಗಿ ಸಿಕ್ಕಿದ್ದು ಈ ನಿಟ್ಟಿನಲ್ಲಿ ಈ ಬಾರಿ ಹಲವರು ಈಗಾಗಲೇ ನಿಗಮಗಳ ಮೇಲೆ ಕಣ್ಣಿಟ್ಟು ಪ್ರಯತ್ನಕ್ಕೆ ಇಳಿದಿದ್ದಾರೆ. ಈಗಾಗಲೇ ಸಚಿವರಾಗಿರುವ ನಾಯಕರ ಬಳಿ ಮನವೊಲಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಇನ್ನು ತಮ್ಮ ಬೆಂಬಲಿತ ನಾಯಕರ ಮೂಲಕ ಸಿಎಂ,ಡಿಸಿಎಂ ಗಮನವನ್ನ ಸೆಳೆದು ಹೇಗಾದರು ಮಾಡಿ ನಿಗಮದಲ್ಲಿ ಅವಕಾಶ ಪಡೆಯಬೇಕು ಎನ್ನುವ ಪ್ರಯತ್ನಕ್ಕೆ ಇಳಿದಿದ್ದಾರೆ. ಜಿಲ್ಲೆಯ ಘಟ್ಟದ ಮೇಲಿನ ನಾಯಕರುಗಳಿಗಿಂತ ಕರಾವಳಿ ಭಾಗದ ನಾಯಕರೇ ಅತಿ ಹೆಚ್ಚಾಗಿ ನಿಗಮದ ಮೇಲೆ ಕಣ್ಣಿಟ್ಟು ಪ್ರಯತ್ನಕ್ಕೆ ಇಳಿದಿದ್ದು ಈ ಬಾರಿ ಯಾರಿಗೆ ಅವಕಾಶ ಸಿಗಲಿದೆ ಎನ್ನುವುದನ್ನ ಕಾದು ನೋಡಬೇಕಾಗಿದೆ.
ಶಾಸಕರಿಗೂ ಅವಕಾಶ ಸಾಧ್ಯತೆ
ಜಿಲ್ಲೆಯಲ್ಲಿ ಈ ಬಾರಿ ದೇಶಪಾಂಡೆ ಮಂತ್ರಿಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ. ಇನ್ನು ಅವಕಾಶ ಕೊಟ್ಟರೇ ಭಟ್ಕಳ ಶಾಸಕ ಮಂಕಾಳ ವೈದ್ಯ ಸಹ ಸಚಿವರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಒಂದೊಮ್ಮೆ ಸಚಿವ ಸ್ಥಾನ ಸಿಗದಿದ್ದರು ಜಿಲ್ಲೆಯ ಉಳಿದ ಮೂರು ಜನ ಶಾಸಕರಿಗೆ ನಿಗಮದಲ್ಲಿ ಅವಕಾಶ ಸಿಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ. ಇದಲ್ಲದೇ ಯಲ್ಲಾಪುರದ ಮಾಜಿ ಶಾಸಕ ವಿ.ಎಸ್ ಪಾಟೀಲ್ ಗೂ ನಿಗಮದಲ್ಲಿ ಅವಕಾಶ ಕಲ್ಪಿಸುವ ಕುರಿತು ಚರ್ಚಿಸಲಾಗಿದೆ ಎನ್ನಲಾಗಿದೆ.
ಶಾಸಕರುಗಳಿಗೆ ದೊಡ್ಡ ನಿಗಮಗಳೇ ನೀಡುವುದು ಅನಿವಾರ್ಯ. ಒಂದೊಮ್ಮೆ ನಿಗಮಗಳನ್ನ ಶಾಸಕರು ಒಪ್ಪದೇ ಇದ್ದರೇ ಅವರ ಬೆಂಬಲಿತರಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಾಗಿದೆ.
ಅವಧಿ ಹಂಚಿಕೆ ಸಾಧ್ಯತೆ
ಈ ಬಾರಿ ನಿಗಮಗಳಿಗೆ ನೇಮಕ ಮಾಡುವಾಗ ಎರಡು ಅಥವಾ ಮೂರು ಅವಧಿಗೆ ಹಂಚಿಕೆ ಮಾಡುವ ಸಾಧ್ಯತೆ ಬಹುತೇಕ ಇದೆ ಎನ್ನಲಾಗಿದೆ. ಕಳೆದ ಬಾರಿ ಕಾಂಗ್ರೆಸ್ ಸರ್ಕಾರ ಇದ್ದ ವೇಳೆಯಲ್ಲಿ 18 ತಿಂಗಳಂತೆ ಎರಡು ಬಾರಿ ನಿಗಮಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಈ ಬಾರಿ ತಲಾ 20 ತಿಂಗಳಂತೆ ಮೂರು ಬಾರಿ ನಿಗಮ ಮಂಡಳಿಗೆ ನೇಮಕ ಮಾಡಿ ಹೆಚ್ಚಿನ ಕಾರ್ಯಕರ್ತರು ನಾಯಕರುಗಳಿಗೆ ಅಧಿಕಾ ಕೊಡುವ ಮೂಲಕ ಪಕ್ಷವನ್ನ ಗಟ್ಟಿಗೊಳಿಸುವ ಪ್ಲಾನ್ ಕೆಪಿಸಿಸಿಯದ್ದು ಎನ್ನಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಹಲವರು ನಿಗಮದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಬಹುತೇಕ ಇದೆ ಎನ್ನಲಾಗಿದೆ.