ಗುಂಡಬಾಳ ಯೋಜನೆಯಿಂದಾಗಿ ಗೋಕರ್ಣದ ಭಾಗದಲ್ಲಿ ನೀರಿನ ಸಮಸ್ಯೆಯಿಂದ ಕೊಂಚ ನಿರಾಳ

ಗೋಕರ್ಣ: ತಾಪಮಾನದ ಏರಿಕೆಯಿಂದಾಗಿ ಎಲ್ಲೆಡೆ ನೀರಿನ ಹಾಹಾಕಾರ ಕೇಳಿಬರುತ್ತಿದೆ. ಆದರೆ ಗೋಕರ್ಣದ ಕೆಲವು ಭಾಗಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಪೈಪ್‍ಲೈನ್ ಮೂಲಕ ಮನೆಮನೆಗೆ ನೀಡುತ್ತಿರುವುದರಿಂದ ಸದ್ಯದ ಮಟ್ಟಿಗೆ ಇಲ್ಲಿ ಅಂತಹ ಸಮಸ್ಯೆ ಕಂಡುಬರುತ್ತಿಲ್ಲ. ಕೊನೆಪಕ್ಷ ಕುಡಿಯುವ ನೀರು ಮತ್ತು ಮನೆ ಬಳಕೆಗೆ ಸಾಕಾಗುಷ್ಟಾದರೂ ದೊರೆಯುತ್ತಿದೆ.
ಅಂಕೋಲಾದ ಕೆಲವು ಭಾಗ ಹಾಗೂ ಗೋಕರ್ಣ, ಕುಮಟಾ ತಾಲೂಕಿನ ವಿವಿಧ ಭಾಗಗಳಿಗೆ ಈ ಯೋಜನೆ ಮೂಲಕವೇ ಮನೆ ಮನೆಗೆ ನೀರನ್ನು ಪೂರೈಸಲಾಗುತ್ತಿದೆ. ಗಂಗಾವಳಿ ನದಿಯ ಗುಂಡಬಾಳದಿಂದ ನೀರನ್ನು ಮಾದನಗೇರಿಯಲ್ಲಿ ಶುದ್ಧೀಕರಣಗೊಂಡು ನಂತರ ಪೈಪ್‍ಲೈನ್ ಮೂಲಕ ನೀರನ್ನು ಪೂರೈಸಲಾಗುತ್ತದೆ.
ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಗುಂಡಬಾಳ ನೀರಿನ ಘಟಕದ ಮೂಲಕ 9 ಗ್ರಾಮ ಪಂಚಾಯತಗಳಿಗೆ ಪ್ರತಿನಿತ್ಯ 45 ಲಕ್ಷ ಲೀ. ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಇನ್ನು ಶಿರಸಿ, ಯಲ್ಲಾಪುರ ಭಾಗಗಳಲ್ಲಿ ಸ್ವಲ್ಪ ಮಳೆಯಾದರೂ ಕೂಡ ಆ ನೀರಿನ ಮೂಲಕ ಬೇಸಿಗೆಯಲ್ಲಿಯೂ ಕೂಡ ನೀರನ್ನು ಪೂರೈಕೆ ಮಾಡುವಷ್ಟು ಲಭ್ಯವಾಗುತ್ತದೆ. ಅಂಕೋಲಾದ ಸಗಡಗೇರಿ, ಅಗ್ರಗೋಣ, ಮೊಗಟಾ, ಕುಮಟಾ ತಾಲೂಕಿನ ಗೋಕರ್ಣ, ತೊರ್ಕೆ, ಹಿರೇಗುತ್ತಿ, ಬರ್ಗಿ, ನಾಡುಮಾಸ್ಕೇರಿ, ಹನೇಹಳ್ಳಿ ಗ್ರಾ.ಪಂ.ಗಳಿಗೆ ನೀರನ್ನು ಬಿಡಲಾಗುತ್ತದೆ.
ಒಟ್ಟು 13 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 13500 ಮನೆಗಳಿಗೆ ನೀರಿನ ಪೂರೈಕೆಯಾಗುತ್ತದೆ. ಒಟ್ಟು 55 ಸಾವಿರ ಜನಸಂಖ್ಯೆಯಿರುವ ಈ ಭಾಗಕ್ಕೆ ಬೇಸಿಗೆಯಲ್ಲಿ ಈ ಯೋಜನೆ ಒಂದು ರೀತಿಯ ವರದಾನವಾಗಿದೆ. ಹಾಗೇ ಕೆಲ ಭಾಗಗಳಲ್ಲಿ ಕೆಲವು ಮನೆಗಳಿಗೆ ಇದುವರೆಗೂ ಪೈಪ್‍ಲೈನ್ ಸಂಪರ್ಕ ಕಲ್ಪಿಸಿಲ್ಲ. ಹಾಗೇ ಅಲ್ಲಲ್ಲಿ ಪೈಪ್‍ಲೈನ್ ಸಮಸ್ಯೆಯಿಂದ ಕೆಲವು ಭಾಗಗಳಿಗೆ ತೊಂದರೆಯೂ ಉಂಟಾಗುತ್ತಿದೆ. ಎರಡು ದಿನಗಳಿಗೊಮ್ಮೆ ನೀರನ್ನು ಸುಮಾರು 3 ತಾಸಿನವರೆಗೂ ಬಿಡಲಾಗುತ್ತಿದೆ. ಇದರಿಂದ ಕುಡಿಯಲು ಮತ್ತು ಮನೆ ಬಳಕೆಗೆ ಸಾಕಾಗುವಷ್ಟು ನೀಡು ಬರುತ್ತಿದೆ. ಒಟ್ಟಿನಲ್ಲಿ ಗುಂಡಬಾಳ ಯೋಜನೆಯಿಂದಾಗಿ ಈ ಭಾಗದಲ್ಲಿ ತಕ್ಕಮಟ್ಟಿಗೆ ಬೇಸಿಗೆಯಲ್ಲಿ ನೀರಿನ ಕೊರತೆ ಇಳಿಮುಖವಾಗಿದೆ.