ಕೋಸ್ಟಗಾರ್ಡ್- ಮೀನುಗಾರರ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ:
ಗಡಿ ದಾಟಿ ಮೀನುಗಾರಿಕೆ ಮಾಡದಿರಿ, ದಾಟಿದರೂ ನೌಕಾಧಿಕಾರಿಗಳು ತೊಂದರೆ ನೀಡದಿರಿ

ಕಾರವಾರ: ಮೀನುಗಾರರ ಸಮಸ್ಯೆಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಂದ ಪರಿಹರಿಸುವುದಾಗಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಭರವಸೆ ನೀಡಿದರು.
ಜಿಲ್ಲಾಧಿಕಾರಿಗಳ ಕಾರ್ಯಾಲಯದ ನ್ಯಾಯಾಂಗ ಸಭಾಂಗಣದಲ್ಲಿ ಮೀನುಗಾರರ ಕುಂದು ಕೊರತೆ ಸಭೆ ನಡೆಸಿದ ಅವರು, ಮೀನುಗಾರರ ಮೇಲೆ ಯಾವುದೇ ತೆರನಾದ ಹಲ್ಲೆ, ನಿಂದನೆ ಮಾಡದಂತೆ ನೌಕಾಧಿಕಾರಿಗಳಿಗೆ ಸಭೆಯಲ್ಲೇ ನಿರ್ದೇಶನ ನೀಡಿದರು. ಮೀನುಗಾರಿಕೆ ಸಂದರ್ಭದಲ್ಲಿ ನಿಗದಿಪಡಿಸಿದ ಗಡಿ ದಾಟಿ ಮೀನುಗಾರಿಕೆ ಮಾಡದಂತೆ ಮೀನುಗಾರರಿಗೆ ಸೂಚನೆ ನೀಡಿದರು.
ಮೀನುಗಾರರ ಸಮಸ್ಯೆಗಳ ಕುರಿತು ಜಿಲ್ಲಾ ಮೀನು ಮಾರಾಟಗಾರರ ಫೆಡರೇಶನ್ ಅಧ್ಯಕ್ಷ ರಾಜು ತಂಡೇಲ್, ಸದ್ಯ ಮೀನುಗಾರರಿಗೆ ಮೀನುಗಾರಿಕೆ ಮಾಡಲು ನೌಕಾಪಡೆಯಿಂದ ಸಾಕಷ್ಟು ತೊಂದರೆಗಳಾಗುತ್ತಿದೆ. ಇದರಿಂದ ಮೀನುಗಾರಿಕೆಗೆ ಸಾಕಷ್ಟು ಹೊಡೆತ ಬಿದ್ದಿದೆ. ಜಿಲ್ಲೆಯ ಮೀನುಗಾರರು ನೌಕಾಪಡೆ ವ್ಯಾಪ್ತಿಯ ಪ್ರದೇಶಗಳನ್ನು ಹೊರತುಪಡಿಸಿ ಮೀನುಗಾರಿಕೆ ಮಾಡುತ್ತಿದ್ದು, ಅದಾಗಿಯೂ ನೌಕಾಧಿಕಾರಿಗಳು ವಿನಾಕಾರಣ ಮೀನುಗಾರರನ್ನು ಹಿಡಿದು ತೊದರೆ ನೀಡುತ್ತಿದ್ದಾರೆ. ಒಂದುವೇಳೆ ಮೀನುಗಾರರಿಂದ ತಪ್ಪುಗಳಾಗಿದ್ದಲ್ಲಿ ಕರಾವಳಿ ಕಾವಲು ಪೊಲೀಸರಿಂದ ಅದನ್ನು ತಡೆಯುವಂತೆ ಆಗಬೇಕೇ ಹೊರತು ನೌಕಾಧಿಕಾರಿಗಳು ಯಾವುದೇ ರೀತಿಯಾಗಿ ತೊದರೆಗಳನ್ನು ನೀಡದಂತೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಜೊತೆಗೆ, ಕೇಂದ್ರ ಸರ್ಕಾರದಿಂದ ಮೀನುಗಾರರಿಗೆ ನೀಡುವ ಸಂಕಷ್ಟ ಪರಿಹಾರವು ತ್ವರಿತವಾಗಿ ಸಂಬಂಧಪಟ್ಟ ಇಲಾಖೆಯಿಂದ ಸಿಗುವಂತಾಗಬೇಕು. ನಾಡದೋಣಿಗಳಿಗೆ ಸೀಮೆಎಣ್ಣೆ ಸರಿಯಾಗಿ ವಿತರಣೆಯಾಗಬೇಕು. ಮೀನುಗಾರ ಮಹಿಳೆಯರಿಗೆ ಮೀನು ಮಾರಾಟ ಮಾಡಲು ಮಾರುಕಟ್ಟೆ ನಿರ್ಮಾಣ ಮಾಡಿಕೊಡಬೇಕು. ಸರ್ಕಾರ ಮೀನುಗಾರರಿಗೆ ಜಾರಿ ತಂದಿರುವ ಯೋಜನೆಗಳನ್ನು ಜಾರಿಗೊಳಿಸಬೇಕು, ಹೀಗೆ ಮುಂತಾದ ಬೇಡಿಕೆಗಳನ್ನು ಪೂರೈಸುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಈ ವೇಳೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಒಂದುವೇಳೆ ಮೀನುಗಾರರ ಅರಿವಿಗೆ ಬಾರದೆ ಸರ್ಕಾರ ನೌಕಪಡೆಗಾಗಿ ನಿಗದಿಪಡಿಸಿದ ಗಡಿ ದಾಟಿ ಮೀನುಗಾರಿಕೆ ಮಾಡಿದರೆ ಅದನ್ನು ಪರಿಶೀಲಿಸಿ ಅವರಿಗೆ ಮಾಹಿತಿ ನೀಡಿ, ಅಲ್ಲಿಂದ ತೆರಳುವಂತೆ ಸೂಚಿಸಬೇಕೇ ಹೊರತು ಮೀನುಗಾರರ ಮೇಲೆ ಯಾವುದೇ ರೀತಿ ತೊಂದರೆಗಳನ್ನು ನೀಡದಂತೆ ನೌಕಾಧಿಕಾರಿಗಳಿಗೆ ಸೂಚಿಸಿದರು. ಸರ್ಕಾರದಿಂದ ಮೀನುಗಾರರಿಗೆ ಜಾರಿಯಾದ ಸಂಕಷ್ಟ ಪರಿಹಾರ ಯೋಜನೆಗಳ ಕುರಿತು ಪರಿಶೀಲಿಸಿ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ್, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕಿ ಕವಿತಾ, ನೌಕಾಧಿಕಾರಿ ರಾಹುಲ್ ಹಾಗೂ ಮೀನುಗಾರರು ಇದ್ದರು.
ನೌಸೇನಾ ಅಧಿಕಾರಿಗಳಿಂದ ಮೀನುಗಾರರನ್ನು ರಕ್ಷಿಸಿ: ಶಾಸಕ ಸೈಲ್ ಮನವಿ
ಕಾರವಾರ: ಕಾರವಾರ ಮತ್ತು ಅಂಕೋಲಾ ಮೀನುಗಾರರನ್ನು ನೌಕಾನೆಲೆ ಅಧಿಕಾರಿಗಳ ದಬ್ಬಾಳಿಕೆಯಿಂದ ರಕ್ಷಿಸಿ ಎಂದು ಶಾಸಕ ಸತೀಶ ಸೈಲ್ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಜಿಲ್ಲಾಧಿಕಾರಿಗಳು ತಮ್ಮ ಕಚೇರಿಯಲ್ಲಿ ನೌಕಾನೆಲೆ ಅಧಿಕಾರಿಗಳು, ಮೀನುಗಾರರ ಸಂಘಟನೆ ಮುಖಂಡರು ಮತ್ತು ಶಾಸಕರ ಸಭೆ ಕರೆದಿದ್ದು, ಸಭೆಗೆ ಪೂರ್ವ ನಿರ್ಧರಿತ ಕಾರ್ಯಕ್ರಮದಲ್ಲಿ ಕ್ಷೇತ್ರದ ಹೊರಗಿದ್ದ ಕಾರಣ ಭಾಗಿಯಾಗಲು ಸಾಧ್ಯವಾಗಿಲ್ಲ. ಆದರೆ ಈ ಬಗ್ಗೆ ಇ- ಮೇಲ್ ಮೂಲಕ ಜಿಲ್ಲಾಧಿಕಾರಿಗಳಿಗೆ ಸಮಸ್ಯೆ ಪರಿಹಾರಕ್ಕೆ ಕೋರಿರುವುದಾಗಿ ಸೈಲ್ ತಿಳಿಸಿದ್ದಾರೆ.
ಬಡ ಮೀನುಗಾರರು ನೌಕಾನೆಲೆ ಸಮುದ್ರ ಪ್ರದೇಶದಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ಅಕಸ್ಮಾತ್ ನೌಕಾನೆಲೆ ಪ್ರದೇಶಕ್ಕೆ ಪ್ರವೇಶಿಸಿದರೆ, ನೌಕಾನೆಲೆ ಅಧಿಕಾರಿಗಳು ಕಾನೂನಿಗೆ ವಿರುದ್ಧವಾಗಿ ವರ್ತಿಸಿ ಮೀನುಗಾರರಿಗೆ ದೈಹಿಕ ಹಲ್ಲೆ ಮಾಡುವುದು, ಅವಮಾನಕಾರಿಯಾಗಿ ನಿಂದಿಸುವುದು, ಬಲೆ ಹರಿದು ಹಾಕುವುದು ಮುಂತಾದ ಅನಾಗರಿಕ ಕ್ರಮಗಳನ್ನು ಮಾಡುತ್ತಿದ್ದು, ಇವುಗಳನ್ನು ಕೂಡಲೇ ನಿಲ್ಲಿಸುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲು ಅವರು ಸಲಹೆ ನೀಡಿದ್ದಾರೆ.