ಕುಡಿಯುವ ನೀರಿನ ಸಮಸ್ಯೆ ಕುರಿತು ಡಿಸಿಯೊಂದಿಗೆ ನಿವೇದಿತ್ ಆಳ್ವಾ ಚರ್ಚೆ

ಹೊನ್ನಾವರ: ಕುಮಟಾ ಮತ್ತು ಹೊನ್ನಾವರ ಭಾಗದ ಜನತೆಗೆ ಅತ್ಯಗತ್ಯವಾದ ಕುಡಿಯುವ ನೀರು ಸಮಸ್ಯೆ ಉಂಟಾಗಿದ್ದು, ತಾತ್ಕಾಲಿಕವಾಗಿ ನೀರು ಪೂರೈಸುವಂತೆ ಕಾಂಗ್ರೆಸ್ ಮುಖಂಡ ನಿವೇದಿತ್ ಆಳ್ವಾ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಬಗ್ಗೆ ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರನ್ನು ಭೇಟಿಯಾಗಿ ಚರ್ಚಿಸಿದ ಅವರು, ಕರಾವಳಿ ಭಾಗದಲ್ಲಿ ಪ್ರತಿನಿತ್ಯವೂ ಬಿಸಿಲಿನ ಬೇಗೆ ಹೆಚ್ಚುತ್ತಿದೆ. ಕುಮಟಾ ಮತ್ತು ಹೊನ್ನಾವರ ತಾಲೂಕಿನ ಪಟ್ಟಣ ಪ್ರದೇಶಗಳು ಹಾಗೂ ಕೆಲವು ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಜನತೆಯ ಮೂಲಭೂತ ಅವಶ್ಯಕತೆಯಾಗಿರುವ ನೀರಿನ ಸಮಸ್ಯೆ ಅತಿಯಾಗಿ ತಲೆದೋರಿದೆ. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಹು ಉಪಯುಕ್ತ ಮರಾಕಲ್ ಕುಡಿಯುವ ನೀರಿನ ಯೋಜನೆಯಡಿ ಕುಮಟಾ ಹಾಗೂ ಹೊನ್ನಾವರ ಪಟ್ಟಣಗಳಿಗೆ ನೀರು ಪೂರೈಸಲಾಗುತ್ತಿದೆ. ಅಘನಾಶಿನಿ ಒಡಲಿನಲ್ಲಿ ಸದಾ ನೀರು ತುಂಬಿರುತ್ತಿದ್ದ ಕಾರಣ ಈ ಹಿಂದೆ ಮರಾಕಲ್‍ಯಿಂದ ನಿರಂತರ ಕುಮಟಾ ಹಾಗೂ ಹೊನ್ನಾವರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರಲಿಲ್ಲ. ಮರಾಕಲ್‍ನಲ್ಲಿಯ ಪಂಪ್‍ಸೆಟ್‍ನಲ್ಲಿ ತಾಂತ್ರಿಕ ದೋಷ ಇಲ್ಲವೇ ವಿದ್ಯುತ್ ಸಮಸ್ಯೆಯಿಂದ ಕೆಲವೊಮ್ಮೆ ನೀರಿನ ಪೂರೈಕೆಯಲ್ಲಿ ಸಮಸ್ಯೆ ಉದ್ಭವಿಸಿದೆ. ಪ್ರತಿ ಮನೆಗೆ 10 ಕೊಡ ನೀರು ಎಂದು ಹಂಚಲಾಗುತ್ತಿದ್ದು, ಎರಡು ದಿನಗಳಿಗೆ ಅದು ಸಾಲುತ್ತಿಲ್ಲ. ಕುಮಟಾ ಪಟ್ಟಣ, ಹೊನ್ನಾವರ ಪಟ್ಟಣ, ಹೆಗಡೆ, ತಾರಿಬಾಗಿಲು, ಕರ್ಕಿ, ಹಳದೀಪುರ, ಅಳಕೋಡ, ದೀವಗಿ, ಮಿರ್ಜಾನ, ಕೋಡ್ಕಣಿ, ಬಾಡ, ಹೊಲನಗದ್ದೆ, ಕಾಗಲ, ದೇವಗಿರಿ, ಕಲಭಾಗ,ಕೂಜಳ್ಳಿ, ವಾಲಗಳ್ಳಿ, ಮುರೂರು, ಕಲ್ಲಬ್ಬೆ, ಮೊರಬಾ, ಬರ್ಗಿ, ಬೆಟ್ಕುಳಿ, ಹಿರೇಗುತ್ತಿ ಮುಂತಾದ ಅನೇಕ ಗ್ರಾಮಗಳಿಗೆ ಹಾಗೂ ಉಪ್ಪುನೀರು ಬರುವ ಪ್ರದೇಶಗಳಿಗೆ ಜನರಿಗೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಸೂಕ್ತ ಆದೇಶ ಹೊರಡಿಸಿ ಹಾಗೂ ಆಯಾ ಸ್ಥಳೀಯ ಆಡಳಿತ ಹಾಗೂ ಅಧಿಕಾರಿಗಳ ಜೊತೆ ಸಮರ್ಪಕ ಚರ್ಚೆ ನಡೆಸಿ, ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿದರು.
ಈ ವೇಳೆ ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ನಾಯಕ, ಮುಖಂಡರಾದ ನಾಗರಾಜ್ ಹಿತ್ತಲಮಕ್ಕಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾರತಿ ಪಟಗಾರ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರವಿ ಶೆಟ್ಟಿ ಕವಲಕ್ಕಿ, ಸೇವಾದಾಳದ ಮುಖಂಡರಾದ ಆರ್.ಎಚ್.ನಾಯ್ಕ ಪುರಸಭಾ ಸದಸ್ಯ ಎಮ್.ಟಿ.ನಾಯ್ಕ, ಮುಖಂಡರಾದ ಭುವನ್ ಭಾಗ್ವತ, ನಾಗರಾಜ್ ನಾಯ್ಕ, ಸಚಿನ್ ನಾಯ್ಕ, ಗಿರೀಶ್ ಪಟಗಾರ ಮತ್ತಿತರರು ಇದ್ದರು.