ಕಾಂಗ್ರೆಸ್, ಬಿಜೆಪಿಯಲ್ಲಿ ಅಭ್ಯರ್ಥಿಗಳ ಹುಡುಕಾಟ ಪ್ರಾರಂಭ: ಕಾಂಗ್ರೆಸ್ ಆಡಳಿತಕ್ಕೆ ಬಂದ ಬೆನ್ನಲ್ಲೇ ಎಂಪಿ ಚುನಾವಣೆ ತಯಾರಿ ಚುರುಕು

ಕಾರವಾರ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಬೇರಿ ಬಾರಿಸಿದ್ದು ಆಡಳಿತಕ್ಕೆ ಬಂದಿದೆ. ಇದರ ಬೆನ್ನಲ್ಲೇ ಸದ್ಯ ಲೋಕಸಭಾ ಚುನಾವಣಾ ತಯಾರಿಗೆ ಪಕ್ಷಗಳು ಮುಂದಾಗಿದ್ದು ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಅಭ್ಯರ್ಥಿ ಯಾರು ಎನ್ನುವ ಚರ್ಚೆ ಕೂಡ ಪ್ರಾರಂಭವಾಗಿದೆ.
ಈ ಬಾರಿಯ ವಿಧಾನಸಭಾ ಚುನಾವಣೆ ಸಾಕಷ್ಟು ಪ್ರತಿಷ್ಠೆಯ ಕಣವಾಗಿದ್ದು, ಆಡಳಿತರೂಢ ಬಿಜೆಪಿ ಹೀನಾಯವಾಗಿ ಸೋಲನ್ನ ಕಂಡಿದ್ದರೆ ಕಾಂಗ್ರೆಸ್ 135 ಸ್ಥಾನದಲ್ಲಿ ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇನ್ನು ಈ ಚುನಾವಣೆ ಕಾಂಗ್ರೆಸ್ ಗೆ ಅಧಿಕಾರಕ್ಕೆ ಬಂದಿರುವುದರಿಂದ ಆತ್ಮ ವಿಶ್ವಾಸ ಹೆಚ್ಚಿಸಿದ್ದರೆ ಬಿಜೆಪಿ ತನ್ನ ತಪ್ಪು ತಿದ್ದುಕೊಂಡು ಎಚ್ಚರಿಕೆ ಹೆಜ್ಜೆ ಇಡಲು ಸೂಚನೆ ಕೊಟ್ಟಂತಾಗಿದೆ. ಬಿಜೆಪಿ ಭದ್ರಕೋಟೆಯಾದ ಉತ್ತರ ಕನ್ನಡದಲ್ಲಿ ಕಾಂಗ್ರೆಸ್ ನಾಲ್ಕು ಸ್ಥಾನದಲ್ಲಿ ಗೆಲುವನ್ನ ಪಡೆಯುವ ಮೂಲಕ ಮತ್ತೆ ಕಾಂಗ್ರೆಸ್ ತನ್ನ ಸಾಮಥ್ರ್ಯ ತೋರಿಸಿತ್ತು. ಸದ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಹೇಗಾದರು ಮಾಡಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲೇ ಬೇಕು ಎನ್ನುವ ತವಕದಲ್ಲಿದ್ದರೆ ಇತ್ತ ಬಿಜೆಪಿ ತನ್ನ ಕ್ಷೇತ್ರವನ್ನ ಬಿಟ್ಟು ಕೊಡದೇ ಉಳಿಸಿಕೊಳ್ಳಲು ಮುಂದಾಗಿದೆ ಎನ್ನಲಾಗಿದೆ.
ಬಿಜೆಪಿಯಲ್ಲಿ ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆ ಕಣಕ್ಕೆ ಇಳಿಯುವುದು ಬಹುತೇಕ ಅನುಮಾನ ಎನ್ನಲಾಗಿದ್ದು ಇದು ಕಾಂಗ್ರೆಸ್ ನಾಯಕರಿಗೆ ಸ್ವಲ್ಪ ಖುಷಿ ನೀಡಿದಂತಾಗಿದೆ. ಹಿಂದೂ ಫೈರ್ ಬ್ರಾಂಡ್ ಅನಂತ್ ಕುಮಾರ್ ನಿಂತರೆ ಗೆಲುವು ಕಷ್ಟ ಎನ್ನುವುದು ಕಾಂಗ್ರೆಸ್ ನಾಯಕರ ಅಭಿಪ್ರಾಯ. ಅದಕ್ಕಾಗಿಯೇ ಚುನಾವಣಾ ಕಣಕ್ಕೆ ಲೋಕಸಭಾ ಚುನಾವಣೆಯಲ್ಲಿ ಇಳಿಯಲು ಹಲವರು ಹಿಂದೇಟು ಹಾಕಿದ್ದರು. ಇನ್ನು ಒಂದೊಮ್ಮೆ ಅನಂತ್ ಕುಮಾರ್ ಹೆಗಡೆ ನಿಲ್ಲದಿದ್ದರೇ ಬಿಜೆಪಿಯಲ್ಲಿ ಟಿಕೇಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಹಲವರ ಹೆಸರು ಕೇಳಿ ಬಂದಿದೆ. ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ ಎನ್ನಲಾಗಿದ್ದು, ಇತ್ತ ಕಾರವಾರದ ಮಾಜಿ ಶಾಸಕಿ ರೂಪಾಲಿ ನಾಯ್ಕ ಸಹ ಕಣಕ್ಕೆ ಇಳಿದರೆ ಅನುಮಾನವಿಲ್ಲ ಎನ್ನಲಾಗಿದೆ.
ಇದರ ನಡುವೆ ಬಿಜೆಪಿ ಜಿಲ್ಲಧ್ಯಕ್ಷ ವೆಂಕಟೇಶ್ ನಾಯ್ಕ, ಶಶಿಭೂಷಣ್ ಹೆಗಡೆ, ನಾಗರಾಜ್ ನಾಯಕ, ವಿವೇಕ್ ಹೆಬ್ಬಾರ್, ಕೆ.ಜಿ ನಾಯ್ಕ ಸೇರಿದಂತೆ ಹಲವರು ಲೋಕಸಭಾ ಚುನಾವಣೆಯಲ್ಲಿ ಟಿಕೇಟ್ ರೇಸ್ ನಲ್ಲಿದ್ದು ಎಲ್ಲರು ಟಿಕೇಟ್ ಗಾಗಿ ಪ್ರಯತ್ನ ನಡೆಸಿದ್ದಾರೆ. ಇನ್ನು ಕಾಂಗ್ರೆಸ್ ನಲ್ಲಿ ಈ ಬಾರಿ ಯಾರು ಅಭ್ಯರ್ಥಿಯಾಗುತ್ತಾರೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಕಾಂಗ್ರೆಸ್ ಸೇರಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಲ್ಲದೇ ಕುಮಟಾ ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಸಹ ಕಾಂಗ್ರೆಸ್ ಸೇರಿ ಅಭ್ಯರ್ಥಿಯಾಗಲು ಪ್ರಯತ್ನ ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.
ಇನ್ನು ದೇಶಪಾಂಡೆ ಅವರ ಪುತ್ರ ಪ್ರಶಾಂತ್ ದೇಶಪಾಂಡೆ, ಕಾರವಾರದ ದೇವದತ್ ಕಾಮತ್, ಬಿ.ಕೆ ಹರಿಪ್ರಸಾದ್ ಸೇರಿ ಹಲವರ ಹೆಸರು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿದ್ದು ಯಾರಿಗೆ ಕೊನೆಯ ಹಂತದಲ್ಲಿ ಟಿಕೇಟ್ ಸಿಗಲಿದೆಯೋ ಅನ್ನುವುದನ್ನ ಕಾದು ನೋಡಬೇಕಾಗಿದೆ.
ಬಿಜೆಪಿಗೆ ಹೆಚ್ಚು ಮತ
2018 ರ ಚುನಾವಣೆಯಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಎಂಟು ಕ್ಷೇತ್ರದಲ್ಲಿ ಐದರಲ್ಲಿ ಬಿಜೆಪಿ ಗೆದ್ದಿದ್ದರೆ 3ರಲ್ಲಿ ಮಾತ್ರ ಕಾಂಗ್ರೆಸ್ ಗೆದ್ದು ದೊಡ್ಡ ಪಕ್ಷವಾಗಿ ಬಿಜೆಪಿ ಉಳಿದಿತ್ತು. ಆದರೆ ಈ ವರ್ಷದ ಚುನಾವಣೆಯಲ್ಲಿ 5 ಸ್ಥಾನದಲ್ಲಿ ಕಾಂಗ್ರೆಸ್ ಮೂರು ಸ್ಥಾನದಲ್ಲಿ ಬಿಜೆಪಿ ಗೆದ್ದರು ಮತ ಗಳಿಕೆಯಲ್ಲಿ ಬಿಜೆಪಿಯೇ ಮೇಲು ಗೈ ಇದೆ. ಈ ಬಾರಿ ಬಿಜೆಪಿ ಕಿತ್ತೂರು, 5,65,912 ಮತಗಳನ್ನ ಬಿಜೆಪಿ ಪಡೆದರೆ, ಕಾಂಗ್ರೆಸ್ 5,14,822 ಮತಗಳನ್ನ ಪಡೆಯುವ ಮೂಲಕ ಬಿಜೆಪಿಯೇ ಹೆಚ್ಚು ಮತ ಪಡೆದ ಪಕ್ಷವಾಗಿದೆ.