ಎಲ್‍ಐಸಿಗೆ 1.93 ಲಕ್ಷ ಕೋಟಿ ನಷ್ಟ:ನೀಡಿಕೆ ಬೆಲೆಗಿಂತಲೂ ಶೇ 40ರಷ್ಟು ಕುಸಿದ ಷೇರು ಬೆಲೆ

ನವದೆಹಲಿ: ಭಾರತೀಯ ಜೀವ ವಿಮಾ ನಿಗಮವು (ಎಲ್‍ಐಸಿ) ದೇಶದ ಷೇರುಪೇಟೆಗಳಲ್ಲಿ ವಹಿವಾಟು ಆರಂಭಿಸಿ ಬುಧವಾರಕ್ಕೆ ಒಂದು ವರ್ಷ ಕಳೆದಿದೆ. ಈ ಅವಧಿಯಲ್ಲಿ ಎಲ್‍ಐಸಿಯ ಷೇರುಗಳ ಬೆಲೆಯು ನೀಡಿಕೆ ಬೆಲೆಗಿಂತಲೂ ಶೇ 40ರವರೆಗೆ ಕುಸಿದಿದ್ದು, ಹೂಡಿಕೆದಾರರ ಸಂಪತ್ತು 1.93 ಲಕ್ಷ ಕೋಟಿಯಷ್ಟು ಕರಗಿದೆ.
ಎಲ್‍ಐಸಿಯು 2022ರಲ್ಲಿ ಆರಂಭಿಕ ಸಾರ್ವಜನಿಕ ಕೊಡುಗೆಯ (ಐಪಿಒ) ಮೂಲಕ 20,557 ಕೋಟಿ ಬಂಡವಾಳ ಸಂಗ್ರಹಿಸಿತು. ಆ ಬಳಿಕ ಮೇ 17ರಂದು ಷೇರುಪೇಟೆಗಳಲ್ಲಿ ವಹಿವಾಟು ಆರಂಭಿಸಿತು. ಮುಂಬೈ ಷೆರುಪೇಟೆಯಲ್ಲಿ (ಬಿಎಸ್‍ಇ) ಎಲ್‍ಐಸಿಯ ಷೇರಿನ ಬೆಲೆಯು ನೀಡಿಕೆ ಬೆಲೆಯಾದ 949ಕ್ಕೆ ಹೋಲಿಸಿದರೆ ಶೇ 39.92ರಷ್ಟು ಕುಸಿತ ಕಂಡಿದೆ. ರಾಷ್ಟ್ರೀಯ ಷೇರುಪೇಟೆಯಲ್ಲಿ (ಎನ್‍ಎಸ್‍ಇ) ಷೇರು ಬೆಲೆಯು ನೀಡಿಕೆ ಬೆಲೆಗೆ ಹೋಲಿಸಿದರೆ ಶೇ 39.93ರಷ್ಟು ಇಳಿಕೆ ಕಂಡಿದೆ.
ಬುಧವಾರದ ವಹಿವಾಟಿನ ಅಂತ್ಯದ ವೇಳೆಗೆ ಬಿಎಸ್‍ಇನಲ್ಲಿ ಪ್ರತಿ ಷೇರಿನ ಬೆಲೆ 570.10 ಮತ್ತು ಎನ್‍ಎಸ್‍ಇನಲ್ಲಿ ಪ್ರತಿ ಷೇರಿನ ಬೆಲೆ 570ಕ್ಕೆ ತಲುಪಿದೆ. ಒಂದು ವರ್ಷದ ವಹಿವಾಟಿನಲ್ಲಿ 920ಕ್ಕೆ ತಲುಪುವ ಮೂಲಕ 52 ವಾರಗಳ ಗರಿಷ್ಠ ಮತ್ತು 530.20ಕ್ಕೆ ತಲುಪುವ ಮೂಲಕ 52 ವಾರಗಳ ಕನಿಷ್ಠ ಮಟ್ಟವನ್ನು ಕಂಡಿದೆ. ಆದರೆ ನೀಡಿಕೆ ಬೆಲೆ 949ನ್ನು ದಾಟಲು ಸಾಧ್ಯವಾಗಿಲ್ಲ. ಈ ಅವಧಿಯಲ್ಲಿ ಬಿಎಸ್‍ಇ ಸೆನ್ಸೆಕ್ಸ್ 7,242 ಅಂಶ (ಶೇ 13.33) ಮತ್ತು ನಿಫ್ಟಿ 1,922 ಅಂಶಗಳಷ್ಟು (ಶೇ 11.82) ಏರಿಕೆ ಕಂಡಿದೆ. ವಹಿವಾಟು ಆರಂಭಿಸಿದ ದಿನ 5.54 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯದೊಂದಿಗೆ ದೇಶದ ಅತ್ಯಂತ ಮೌಲ್ಯಯುತ ಕಂಪನಿಗಳ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿತ್ತು. ಸದ್ಯ ಕಂಪನಿಯು 13ನೇ ಸ್ಥಾನದಲ್ಲಿ ವಹಿವಾಟು ನಡೆಸುತ್ತಿದೆ.
ಕಾಂಗ್ರೆಸ್ ಆರೋಪ; ಬಿಜೆಪಿ ನಕಾರ
ಎಲ್‍ಐಸಿಯ ಮಾರುಕಟ್ಟೆ ಮೌಲ್ಯ ಕುಸಿತ ಕಂಡಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ಅದಾನಿ ಕಂಪನಿಗಳಲ್ಲಿ ಹೂಡಿಕೆ ಮಾಡಿರುವುದರಿಂದಲೇ ಎಲ್‍ಐಸಿಯ ಮಾರುಕಟ್ಟೆ ಮೌಲ್ಯ ಕುಸಿಯುವಂತಾಗಿದೆ ಎಂದು ಆರೋಪ ಮಾಡಿದೆ. ಆದರೆ ಬಿಜೆಪಿ ಈ ಆರೋಪವನ್ನು ತಳ್ಳಿಹಾಕಿದೆ.
ಎಲ್‍ಐಸಿಯ ಮಾರುಕಟ್ಟೆ ಬಂಡವಾಳ ಮೌಲ್ಯ ಕುಸಿತ ಕಾಣಲು ಏಕೈಕ ಕಾರಣ ‘ಮೋದಾನಿ’ (ಮೋದಿ ಮತ್ತು ಅದಾನಿ). ಈ ಪ್ರಕ್ರಿಯೆಯಲ್ಲಿ ಪಾಲಿಸಿದಾರರು ಲಕ್ಷಗಟ್ಟಲೆ ಹಣ ಕಳೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪ ಮಾಡಿದ್ದಾರೆ. ಅದಾನಿ ಸಮೂಹದ ಕಂಪನಿಗಳಲ್ಲಿ ಎಲ್‍ಐಸಿಯ ಹೂಡಿಕೆಯು ಶೇ 1ಕ್ಕಿಂತಲೂ ಕಡಿಮೆ ಇದೆ. ಅರ್ಧ ಮಾಹಿತಿ ಕೊಡುವ ಮೂಲಕ ಜನರ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಹೇಳಿದ್ದಾರೆ.