ಉಚಿತ ವಿದ್ಯುತ್ ಘೋಷಣೆಯ ಬಳಿಕ ಹೆಚ್ಚಾದ ಹಲ್ಲೆ; ಹೆಸ್ಕಾಂ ನೌಕರರ ಖಂಡನೆ

ಯಲ್ಲಾಪುರ: ಸರ್ಕಾರದ ಚುನಾವಣಾ ಪೂರ್ವ ಘೋಷಣೆಗಳ ಕಾರಣಕ್ಕೆ ವಿದ್ಯುತ್ ಇಲಾಖೆ ಸಿಬ್ಬಂದಿಗಳ ಮೇಲೆ ಹಲ್ಲೆಯಂತಹ ಪ್ರಕರಣಗಳು ಹೆಚ್ಚಾಗುತ್ತಿದೆ. ಸರ್ಕಾರ ಮತ್ತು ಇಲಾಖೆ ಈ ಕುರಿತು ಗಂಭೀರವಾಗಿ ಚಿಂತಿಸಿ ಸಿಬ್ಬಂದಿಗಳ ಗೌರವ ಜೀವಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳುವಂತೆ ಹೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕರ್ನಾಟಕ ವಿದ್ಯುತ್ ನಿಗಮ ನೌಕರರ ಸಂಘದ ಪ್ರಾಥಮಿಕ ಸಮಿತಿಯ ಅಡಿಯಲ್ಲಿ ಗುರುವಾರ ತಹಶಿಲ್ದಾರ ಗುರುರಾಜ್ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ರಾಜ್ಯದಲ್ಲಿ ಇತ್ತೀಚಿಗೆ ಮುಕ್ತಾಯವಾದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷ ಐದು ಗ್ಯಾರಂಟಿ ನೀಡಿದ್ದು ಅದರಲ್ಲಿ ‘ಗೃಹ ಜ್ಯೋತಿ’ ಕೂಡ ಒಂದಾಗಿದೆ. ಇದರ ಪ್ರಕಾರ ಪ್ರತಿ ಮನೆಗೆ 200 ಯುನಿಟ್ ವರೆಗೆ ಕರೆಂಟ್ ಬಿಲ್ ಉಚಿತ ಎಂಬುದಾಗಿತ್ತು. ಇದೀಗ ಅದೇ ಪಕ್ಷ ಅಧಿಕಾರಕ್ಕೆ ಬಂದಿದೆ. ಕೊಟ್ಟ ಭರವಸೆಯನ್ನಾಧರಿಸಿ ರಾಜ್ಯದ ವಿದ್ಯುತ್ ಗ್ರಾಹಕರು ವಿದ್ಯುತ್ ಬಿಲ್ ಭರಿಸಲು ನಿರಾಕರಿಸುತ್ತಿದ್ದಾರೆ. ಬಿಲ್ ವಸೂಲಿಗೆ ತೆರಳುತ್ತಿರುವ ವಿದ್ಯುತ್ ಇಲಾಖೆ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡುತ್ತಿದ್ದಾರೆ. ಅಲ್ಲದೇ ಕೊಪ್ಪಳದಲ್ಲಿ ವಿದ್ಯುತ್ ಇಲಾಖೆ ಸಿಬ್ಬಂದಿಗೆ ಚಪ್ಪಲಿಯಿಂದ ಥಳಿಸಿಯೂ ಆಗಿದೆ. ಈವರೆಗೆ ಕೆಲವೇ ಕಡೆಗಳಲ್ಲಿ ನಡೆಯುತ್ತಿದ್ದ ಇಂತಹ ಘಟನೆಗಳು ರಾಜ್ಯದ ಮೂಲೆಮೂಲೆಗಳಲ್ಲಿ ಪಸರಿಸುತ್ತಿದ್ದು, ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಸಮಸ್ಯೆ ತಂದೊಡ್ಡಿದೆ ಎಂದು ತಿಳಿಸಿದ್ದಾರೆ.
ಈ ಸಂಬಂಧ ವಿದ್ಯುತ್ ನಿಗಮ ಸರ್ಕಾರದೊಂದಿಗೆ ಚರ್ಚಿಸಿ ಉಚಿತ ವಿದ್ಯುತ್ ಯೋಜನೆಯು ಎಂದಿನಿಂದ ಪ್ರಾರಂಭವಾಗುತ್ತದೆ, ಅದರ ಮಾನದಂಡಗಳೇನು ಎಂಬುದನ್ನು ಮುದ್ರಣ ಮಾದ್ಯಮ ಮತ್ತು ದೃಶ್ಯ ಮಾದ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ರಾಜ್ಯದ ಜನತೆಗೆ ಸ್ಪಷ್ಟ ಮಾಹಿತಿ ನೀಡುವಂತಾಗಬೇಕು. ಇಲ್ಲವಾದಲ್ಲಿ ವಿದ್ಯುತ್ ಇಲಾಖೆ ಅಡಿ ಕರ್ತವ್ಯ ನಿರ್ವಹಿಸುವ ಸಹಸ್ರಾರು ಮಂದಿ ಲೈನ್‍ಮನ್‍ಗಳು, ಬಿಲ್ ಕಲೆಕ್ಟರ್‍ಗಳು ಹಾಗೂ ಸಾರ್ವಜನಿಕರ ಮಧ್ಯೆ ಸಂಘರ್ಷಕ್ಕೆ ದಾರಿಯಾಗಲಿದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ ಕೊಪ್ಪಳದಲ್ಲಿ ಜೆಸ್ಕಾಂ ಸಿಬ್ಬಂದಿ ಮೇಲಿನ ಹಲ್ಲೆ ಖಂಡಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಿದ್ಯುತ್ ನೌಕರರ ಸಂಘದ ಪ್ರಾಥಮಿಕ ಸಮಿತಿ ಅಧ್ಯಕ್ಷ ಶೇಖರ್ ಯರಗೇರಿ, ಕಾರ್ಯದರ್ಶಿ ಛಾಯಪ್ಪ, ವಿನಯ, ಸತೀಶ ಹಾಗೂ ಅಧಿಕಾರಿಗಳಾದ ರಮಾಕಾಂತ ನಾಯ್ಕ, ವಿನಾಯಕ ಶೇಟ್, ರವಿಚಂದ್ರ ಪಾಟೀಲ್, ಸುನಿಲ್ ಬಿ.ಕೆ., ಲಕ್ಷ್ಮಣ್ ಜೋಗಳೇಕರ್ ಮತ್ತು ಮೀಟರ್ ರೀಡರ್‍ಗಳು, ಲೈನ್‍ಮನ್‍ಗಳು ಹಾಗೂ ಇನ್ನಿತರ ಸಿಬ್ಬಂದಿಗಳು ಉಪಸ್ಥಿತರಿದ್ದರು.