ಜಿಲ್ಲಾ ಸುದ್ದಿಸ್ಪೆಷಲ್ ರಿಪೋರ್ಟ್

ಆಚೆಕೇರಿ ಅಂಚಿನಲ್ಲಿ ಮಕರಂಧದ ಆರಾಧನೆ: 85ರ ಅಜ್ಜನಿಗೆ ಸಣ್ಣ ಸಣ್ಣ ದುಂಬಿಗಳೇ ಪ್ರಪಂಚ

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬಳಿಯ ಮಳಲಗಾಂ ಗ್ರಾಮದ ಆಚೆಕೇರಿ ಆಜುಬಾಜು ಬೆಟ್ಟ- ಗುಡ್ಡಗಳ ಜೊತೆ ತೋಟ- ಅಂಗಳದಲ್ಲಿಯೂ ದುಂಬಿಗಳ ಸದ್ದು ಕೇಳುತ್ತದೆ. ಆ ನಾದವನ್ನು ಆಲಿಸುವವರನ್ನು 85 ವರ್ಷದ ಸುಬ್ರಾಯ ಭಾಗ್ವತ್ ಪ್ರೀತಿಯಿಂದ ಕರೆದು ಮಾತನಾಡಿಸುತ್ತಾರೆ.
ಬಾಲ್ಯದಲ್ಲಿ ದನ ಕಾಯುವ ಕೆಲಸ ನೆಚ್ಚಿಕೊಂಡಿದ್ದ ಸುಬ್ರಾಯ ಭಾಗ್ವತ್ ಅವರು ಆ ಹಳ್ಳಿಯಲ್ಲಿ ತಿರುಗಾಡದ ಬೆಟ್ಟವಿಲ್ಲ. ಯಾವ ಬೆಟ್ಟದಲ್ಲಿ ಯಾವ ಬಗೆಯ ಹೂವುಗಳಿವೆ? ಅಲ್ಲಿ ಯಾವ ಕಾಲಕ್ಕೆ ಯಾವ ಯಾವ ದುಂಬಿಗಳು ಬರತ್ತವೆ? ಎಂಬ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಅವರದ್ದು. ಅದರಲ್ಲಿಯೂ ಮುಂಜಂಟಿ (ಮಿಸರಿ/ಚುಚ್ಚದ ಜೇನು)ಗಳ ಬಗ್ಗೆ ಅವರಿಗೆ ಅಪಾರ ಆಸಕ್ತಿ.
ತಮ್ಮ 12ನೇ ವಯಸ್ಸಿನಿಂದಲೂ ಬೆಟ್ಟ ಗುಡ್ಡಗಳನ್ನು ತಿರುಗುತ್ತಿದ್ದ ಅವರು ಅಲ್ಲಿ ಕಂಡ ಮುಜಂಟಿ ಗೂಡುಗಳನ್ನು ಬಿದಿರಿನ ಹಂಡೆಗೆ ತುಂಬಿಸಿ ಮನೆಗೆ ತರುತ್ತಿದ್ದರು. ಅದೇ ಗೂಡುಗಳು ಅಂಗಳ ಪೂರ್ತಿ ತುಂಬಿಕೊಂಡಿದೆ. ಆ ಪರಿಸರದಲ್ಲಿ ನಾನಾ ಬಗೆಯ ದುಂಬಿಗಳು ವರ್ಷವಿಡೀ ಹೂವಿಂದ ಹೂವಿಗೆ ಹಾರಿ ಮಕರಂದ ಹೀರುತ್ತವೆ. ಬಾಲ್ಯದಿಂದಲೂ ಪುಟ್ಟ ಪುಟ್ಟ ದುಂಬಿಗಳ ಜೊತೆ ಭಾವನಾತ್ಮಕ ನಂಟು ಬೆಸೆದುಕೊಂಡ ಸುಬ್ರಾಯ ಭಾಗ್ವತ್ ಅವರು ತಮ್ಮ ಇಳಿವಯಸ್ಸಿನಲ್ಲಿಯೂ ನಿತ್ಯ ಲಕ್ಷಾಂತರ ದುಂಬಿಗಳ ಜೊತೆ ಕಾಲ ಕಳೆಯುತ್ತಾರೆ. ಅವುಗಳ ಜೀವನ ಶೈಲಿಯ ಅಧ್ಯಯನ ನಡೆಸಿ, ತಾವು ಶಿಸ್ತು ಹಾಗೂ ಶ್ರಮದ ಜೀವನ ನಡೆಸುತ್ತಿದ್ದಾರೆ. ಮುಜಂಟಿ ಜೇನುಗಳ ಜೊತೆ ತುಡುವೆ ಜೇನುನೊಣಗಳನ್ನು ಸಹ ಅವರು ಸಾಕುತ್ತಿದ್ದಾರೆ. ಕೃಷಿ-ತೋಟಗಾರಿಕೆಯ ಜೊತೆ ಈ ಹವ್ಯಾಸ ಅವರ ಜೀವನೋತ್ಸಾಹವನ್ನು ಇಮ್ಮಡಿಗೊಳಿಸಿದೆ.
ಸುಬ್ರಾಯ ಭಾಗ್ವತ್ ಅವರ ಮನೆ ಅಂಗಳದಲ್ಲಿ ವಿವಿಧ ಬಗೆಯ ಹೂ, ತರಕಾರಿ ಹಾಗೂ ಹಣ್ಣಿನ ಗಿಡಗಳಿವೆ. ಅಡಿಕೆ-ತೆಂಗು ಸಹ ಪ್ರಮುಖ ಬೆಳೆಯಾಗಿದ್ದು, ಆ ಗಿಡಗಳನ್ನು ಆಶ್ರಯಿಸಿ ದುಂಬಿಗಳು ಜೀವಿಸಿವೆ. ದುಂಬಿಗಳ ಸಾಕಾಣಿಕೆಯಿಂದ ಫಸಲಿನ ಇಳುವರಿಯೂ ಅಧಿಕವಾಗಿದೆ ಎಂಬುದು ಅವರ ಅನುಭವದ ಮಾತು. ತುಡುವೆ ಜೇನುತುಪ್ಪವನ್ನು ಅವರು ಮಾರಾಟ ಮಾಡುತ್ತಾರೆ. ಮುಜಂಟಿ ತುಪ್ಪವನ್ನು ಔಷಧಿಗಾಗಿ ಬಯಸಿ ಅನೇಕರು ಮನೆಗೆ ಬರುತ್ತಾರೆ. ಜೇನು ಸಾಕಾಣಿಕೆಯಿಂದ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಲಾಭ ಆಗದಿದ್ದರೂ ಅದರಿಂದ ನೆಮ್ಮದಿಯಿದೆ ಎಂಬುದು ಇಡೀ ಕುಟುಂಬದವರ ಒಮ್ಮತದ ಅಭಿಪ್ರಾಯ.

ಈತ ಹಳ್ಳಿಗಾಡಿನ ಸಂಶೋಧಕ!

ಸದಾ ಚಟುವಟಿಕೆಯಿಂದ ಇರುವ ಸುಬ್ರಾಯ ಭಾಗ್ವತ್ (85) ಎಂದಿಗೂ ಸುಮ್ಮನೆ ಕೂರುವವರಲ್ಲ. ಶೂನ್ಯದಿಂದಲೇ ಏನಾದರೂ ಸಾಧಿಸಬೇಕು ಎನ್ನವ ಅವರು ಯಾರಿಗೂ ಬೇಡವಾದ ಸಾಮಗ್ರಿಗಳಿಂದ ವಿವಿಧ ಉಪಕರಣಗಳನ್ನು ತಯಾರಿಸಿದ್ದಾರೆ. ಕೃಷಿ ಚಟುವಟಿಕೆಗೆ ಅಗತ್ಯವಿರುವ ಹಾಗೂ ರೈತರಿಗೆ ಉಪಯೋಗವಾಗಬಹುದಾದ ಹಲವು ಸಾಧನಗಳನ್ನು ಅವರು ಸ್ವತಃ ತಯಾರಿಸಿ ಉಪಯೋಗಿಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
google.com, pub-7043077280577910, DIRECT, f08c47fec0942fa0

You cannot copy content of this page

Close